ಸಿದ್ದರಾಮಯ್ಯ ಸರಕಾರದಿಂದ ವ್ಯವಸ್ಥಿತವಾಗಿ ಬೆಂಕಿ ಹಚ್ಚುವ ಕೆಲಸ: ಬಿಜೆಪಿ

ಮಂಗಳವಾರ, 3 ಜನವರಿ 2017 (16:14 IST)
ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರಕಾರ ರಾಜ್ಯಕ್ಕೆ ವ್ಯವಸ್ಥಿತವಾಗಿ ಬೆಂಕಿ ಹಚ್ಚುವ ಕೆಲಸ ಮಾಡುತ್ತಿದೆ ಎಂದು ಬಿಜೆಪಿ ಹಿಂದುಳಿದ ವರ್ಗಗಳ ಮೋರ್ಚಾದ ರಾಜ್ಯ ಕಾರ್ಯದರ್ಶಿ ಸತ್ಯಜಿತ ಸುರತ್ಕಲ್ ಗಂಭೀರವಾಗಿ ಆರೋಪಿಸಿದ್ದಾರೆ.
ಮಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇತ್ತೀಚೆಗೆ ಕೊಣಾಜೆಯಲ್ಲಿ ನಡೆದ ಕಾರ್ತಿಕರಾಜ್ ಹತ್ಯೆ ಪ್ರಕರಣದ ಆರೋಪಿಗಳ ಬಂಧನಕ್ಕೆ ಆಗ್ರಹಿಸಿ ನಡೆದ ಪ್ರತಿಭಟನೆಯಲ್ಲಿ ದಕ್ಷಿಣ ಕನ್ನಡ ಸಂಸದ ನಳಿನ್ ಕುಮಾರ್ ಕಟೀಲ್ ಭಾವೋದ್ವೇಗದಲ್ಲಿ ಆಡಿದ ಶಬ್ದಗಳನ್ನು ಹಿಡಿದುಕೊಂಡು ಕಾಂಗ್ರೆಸ್ ನಾಯಕರು ಬೊಬ್ಬೆ ಹೊಡೆಯುತ್ತಿರುವುದು ನೋಡಿದರೇ 'ದೆವ್ವದ ಬಾಯಲ್ಲಿ ಭಗವದ್ಗೀತೆ' ಕೇಳಿದಂತ ಮಾತು ನೆನಪಾಗುತ್ತದೆ ಎಂದು ಲೇವಡಿ ಮಾಡಿದರು.  
 
ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬಂದ ದಿನಗಳಿಂದ ಗೋಹತ್ಯೆಗೆ ಮುಕ್ತ ಅವಕಾಶ ಹಾಗೂ ಕಾನೂನಿನ ಹೆಸರಿನಲ್ಲಿ ಹಿಂದುಗಳ ನಂಬಿಕೆಗಳಿಗೆ ಕೊಡಲಿ ಏಟು ಹಾಕುವ ಯತ್ನ ನಡೆಸಲಾಗುತ್ತಿದೆ ಎಂದು ಬಿಜೆಪಿ ಹಿಂದುಳಿದ ವರ್ಗಗಳ ಮೋರ್ಚಾದ ರಾಜ್ಯ ಕಾರ್ಯದರ್ಶಿ ಸತ್ಯಜಿತ ಸುರತ್ಕಲ್ ರಾಜ್ಯ ಸರಕಾರದ ವಿರುದ್ಧ ವಾಗ್ದಾಳಿ ನಡೆಸಿದರು.  
 
ಕೊಣಾಜೆಯಲ್ಲಿ ನಡೆದ ಕಾರ್ತಿಕ್‌ರಾಜ್ ಕೊಲೆ ಪ್ರಕರಣದ ಆರೋಪಿಗಳನ್ನು 10 ದಿನಗಳಲ್ಲಿ ಬಂಧಿಸದಿದ್ದರೆ ದಕ್ಷಿಣ ಕನ್ನಡ ಜಿಲ್ಲೆಯೆ ಬೆಂಕಿ ಹಚ್ಚಲು ನಮಗೂ ಗೊತ್ತು ಎಂದು ಸಂಸದ ನಳಿನ್ ಕುಮಾರ್ ಕಟೀಲ್ ವಿವಾದಾತ್ಮಕ ಹೇಳಿಕೆ ನೀಡಿದ್ದರು.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ