ಕಾಫಿ, ಶುಂಠಿ ಬೆಳೆಗಾರ ಕಾಡಾನೆಗಳ ದಾಳಿಗೆ ಕಂಗಾಲು

ಗುರುವಾರ, 19 ಜುಲೈ 2018 (14:19 IST)
ಜಿಲ್ಲೆಯಲ್ಲಿ ಮುಂದುವರಿದ ಕಾಡಾನೆಗಳ ಹಾವಳಿಗೆ ಶುಂಠಿ ಬೆಳೆಗಾರ ಇನ್ನಿಲ್ಲದಂತೆ ಹೈರಾಣಾಗುತ್ತಿದ್ದಾನೆ. ಕಾಡಾನೆ ಹಾವಳಿ ತಡೆಗೆ ಒತ್ತಾಯಿಸಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಹೀಗಾಗಿ ಆಗಾಗ್ಗೆ ಕಾಣಿಸಿಕೊಳ್ಳುತ್ತಿರುವ ಕಾಡಾನೆಗಳು ಹಾವಳಿ ನಡೆಸುತ್ತ ಬೆಳೆಗಾರರ ಆರ್ಥಿಕ ಸಂಕಷ್ಟಕ್ಕೆ ಕಾರಣರಾಗುತ್ತಿದ್ದಾರೆ. 
 

ರೈತರ ಕೃಷಿ ಫಸಲು ನಾಶವಾಗುತ್ತಿದೆ. ಶುಂಠಿ ಕೃಷಿ ಬೆಳೆಗೆ ಕಾಡಾನೆ ದಾಳಿಯಿಂದ ಕಂಗಾಲಾದ ರೈತರು ಪಾಲಿಬೆಟ್ಟ ಮೇಕೂರು ಭಾಗದಲ್ಲಿ ಕಾಡಾನೆ ಹಾವಳಿ ತಡೆಗೆ ಒತ್ತಾಯ ಮಾಡಿದ್ದಾರೆ. ಕೊಡಗು ಜಿಲ್ಲೆಯ ವಿರಾಜಪೇಟೆ ತಾಲ್ಲೂಕಿನ ಪಾಲಿಬೆಟ್ಟ ಮೇಕೂರು ಭಾಗದಲ್ಲಿ ಹದಿನಾರಕ್ಕೂ ಹೆಚ್ಚು ಕಾಡಾನೆಗಳ ಹಿಂಡು ಕಳೆದ ಹದಿನೈದು ದಿನಗಳಿಂದ ಕಾಣಿಸಿಕೊಂಡಿವೆ. ಆ ಭಾಗದಲ್ಲಿ ಶುಂಠಿ ಸೇರಿದಂತೆ ಕಾಫಿ ಬೆಳೆಗಳನ್ನು ತುಳಿದು ನಾಶ ಮಾಡುವ ಮೂಲಕ ಕಾರ್ಮಿಕರು, ರೈತರಲ್ಲಿ ಆತಂಕ ಮೂಡಿಸಿವೆ.

ಕಾಫಿ ತೋಟ, ಶುಂಠಿ ಬೆಳೆಗಳ ಮೇಲೆ ನಿರಂತರ ದಾಳಿ ಮಾಡುತ್ತಿರುವ ಕಾಡಾನೆಗಳ ಹಿಂಡುನಿಂದ ಲಕ್ಷಾಂತರ ರೂಪಾಯಿ ನಷ್ಟ ಉಂಟಾಗುತ್ತಿದೆ. ಕಾಡಾನೆ ಹಾವಳಿಯಿಂದ ಕಾರ್ಮಿಕರು ಕೆಲಸಕ್ಕೆ ತೆರಳದೆ ಮನೆಯಲ್ಲೇ ಉಳಿದುಕೊಳ್ಳುವ ಪರಿಸ್ಥಿತಿ ನಿರ್ಮಾಣವಾಗಿದೆ. ಹಾಡುಹಗಲೇ ಕಾಣಿಸಿಕೊಳ್ಳುತ್ತಿರುವ ಕಾಡಾನೆ ಹಾವಳಿಯಿಂದ ಶಾಲಾ ವಿದ್ಯಾರ್ಥಿಗಳು,  ಕಾರ್ಮಿಕರು, ಬೆಳೆಗಾರರು ಭಯಭೀತರಾಗಿದ್ದಾರೆ. ಶುಂಠಿ ಕೃಷಿ ಮಾಡಿದ ಬೆಳೆಗೆ ಕಾಡಾನೆಗಳ ಹಿಂಡು ದಾಳಿ ಮಾಡಿ ಅಪಾರ ಪ್ರಮಾಣದ ಶುಂಠಿ ಬೆಳೆಯನ್ನು ನಾಶ ಮಾಡಿದೆ. ಇದರಿಂದ ಲಕ್ಷಾಂತರ ರೂಪಾಯಿ ನಷ್ಟ ಉಂಟಾಗಿದೆ ಎಂದು ಶುಂಠಿ ಬೆಳೆಗಾರ ಸೈನುಲ್ಲಾ ಅಳಲು ತೋಡಿಕೊಂಡಿದ್ದಾರೆ.  

ನಿರಂತರ ಕಾಡಾನೆ ಹಾವಳಿಯಿಂದ ಕೆಲಸ ಮಾಡಲು ಸಾಧ್ಯವಾಗದೇ ಕಂಗಾಲಾಗಿದ್ದೇವೆ. ಈ ಭಾಗದಲ್ಲಿ ಬೀಡು ಬಿಟ್ಟಿರುವ ಕಾಡಾನೆ ಹಿಂಡುಗಳನ್ನು ಶಾಶ್ವತವಾಗಿ ಕಾಡಿಗೆ ಅಟ್ಟಬೇಕೆಂದು ಕಾರ್ಮಿಕರು ಒತ್ತಾಯಿಸಿದ್ದಾರೆ.



ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ