ದೇವಸ್ಥಾನಕ್ಕೆ ತೆರಳುತ್ತಿದ್ದ ವೇಳೆ ಡಿಕ್ಕಿ: ಮೂವರು ಸ್ಥಳದಲ್ಲೇ ಸಾವು

Sampriya

ಶನಿವಾರ, 14 ಫೆಬ್ರವರಿ 2026 (19:21 IST)
ಯಾದಗಿರಿ: ದೇವರ ದರ್ಶನಕ್ಕೆ ತೆರಳುತ್ತಿದ್ದ ವೇಳೆ ಕ್ರೂಸರ್ ವಾಹನ ರಸ್ತೆ ಬದಿಯ ತಡೆಗೋಡೆಗೆ ಡಿಕ್ಕಿ ಹೊಡೆದ ಪರಿಣಾಮ 3ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಆಂಧ್ರಪ್ರದೇಶದ ಜಡಚರ್ಲಾ ಬಳಿಯ ರಾಜ್ಯ ಹೆದ್ದಾರಿಯಲ್ಲಿ ನಡೆದಿದೆ.

ಮೃತರನ್ನು ಯಾದಗಿರಿ ಜಿಲ್ಲೆಯ ಶಾಹಪುರ ತಾಲೂಕಿನ ಗೋಗಿ ಗ್ರಾಮದ ನಿವಾಸಿಗಳಾದ ರಾಮರೆಡ್ಡಿ (52), ಅವರ ಪತ್ನಿ ಮೇಘಾ (50) ಹಾಗೂ ರಾಮರೆಡ್ಡಿಯ ಅತ್ತೆ, ವಿಜಯಪುರ ಜಿಲ್ಲೆ ಮೂಲದ ಮಹಾದೇವಪ್ಪ (65) ಎಂದು ಗುರುತಿಸಲಾಗಿದೆ.

ಮೃತ ರಾಮರೆಡ್ಡಿ ಕುಟುಂಬಸ್ಥರು ಹಾಗೂ ಸಂಬಂಧಿಕರೊಂದಿಗೆ ಕ್ರೂಸರ್ ವಾಹನದಲ್ಲಿ ಯಾದಗಿರಿಯಿಂದ ಶ್ರೀಶೈಲ ಮಲ್ಲಿಕಾರ್ಜುನ ದೇವಾಲಯ ದರ್ಶನಕ್ಕೆ ತೆರಳುತ್ತಿದ್ದ ವೇಳೆ ಈ ಅವಘಡ ಸಂಭವಿಸಿದೆ. ನಿನ್ನೆ ಯಾದಗಿರಿ ನಗರದಲ್ಲಿ ಮೊಮ್ಮಗನ ಜವಳ ಕಾರ್ಯಕ್ರಮ ಮುಗಿಸಿಕೊಂಡು ಶ್ರೀಶೈಲಕ್ಕೆ ಪ್ರಯಾಣಿಸುತ್ತಿದ್ದ ವೇಳೆ ಈ ದುರ್ಘಟನೆ ನಡೆದಿದೆ.

ಚಾಲಕ ನಿದ್ದೆ ಮಂಪರಿನಲ್ಲಿ ಇದ್ದ ಕಾರಣಕ್ಕೆ ಅಪಘಾತ ಸಂಭವಿಸಿರುವ ಶಂಕೆ ವ್ಯಕ್ತವಾಗಿದೆ. ಘಟನೆಯಲ್ಲಿ ಗಾಯಗೊಂಡ ಐವರು ಸ್ಥಳೀಯ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ