ಆರ್ ಎಸ್ಎಸ್ ಏನು ಮಾಡುತ್ತಿದೆ ಎಂದು ತಿಳಿಯಲು ಎಚ್ ಡಿಕೆ ಶಾಖೆಗೆ ಬರಲಿ: ನಳಿನ್ ಕಟೀಲ್
ಮಂಗಳವಾರ, 19 ಅಕ್ಟೋಬರ್ 2021 (14:28 IST)
ಹುಬ್ಬಳ್ಳಿ : ರಾಷ್ಟ್ರೀಯ ಸ್ವಯಂ ಸೇವಕ ಸಂಘ ಏನು ಮಾಡುತ್ತಿದೆ, ದೇಶಕ್ಕೆ ಅದರ ಸೇವೆ ಏನೆಂಬುದು ಅರಿಯಲು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಸಂಘ ಶಾಖೆಗೆ ಬಂದು ನೋಡಲಿ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ತಿಳಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು,ರಾಷ್ಟ್ರ ಕಟ್ಟುವ, ಸೇವೆ ಸಲ್ಲಿಸುವ ಕಾಯಕದಲ್ಲಿ ತೊಡಗಿದೆ. ದೇಶದಲ್ಲಿ ಅಷ್ಟೇ ಅಲ್ಲ ವಿಶ್ವದ ಅನೇಕ ದೇಶಗಳಲ್ಲಿ ತನ್ನ ಕಾರ್ಯಕ್ಷೇತ್ರ ಹೊಂದಿದೆ ಎಂಬುದನ್ನು ಕುಮಾರಸ್ವಾಮಿ ಅರಿಯಲಿ ಎಂದರು.
ಕುಟುಂಬ ರಾಜಕಾರಣಕ್ಜೆ ಜೋತು ಬಿದ್ದಿರುವ ಕುಮಾರಸ್ವಾಮಿ ಅವರಿಗೆ ಎಲ್ಲವೂ ಹಳದಿಯಾಗಿಯೇ ಕಾಣುತ್ತಿದೆ. ಹಾಗಾಗಿಯೇ ಏನೇನೋ ಮಾತನಾಡುತ್ತಿದ್ದಾರೆ ಎಂದರು.
ಹಾನಗಲ್ಲ, ಸಿಂದಗಿ ಎರಡು ಕ್ಷೇತ್ರಗಳಲ್ಲೂ ಬಿಜೆಪಿ ಗೆಲ್ಲಲಿದೆ. ನಂತರ ವಿಧಾನಪರಿಷತ್ತುಗೆ ಸ್ಥಳೀಯ ಸಂಸ್ಥೆಗಳು, ಪದವೀಧರ ಹಾಗೂ ಪಶ್ಚಿಮ ಶಿಕ್ಷಕರ ಕ್ಷೇತ್ರದ ಚುನಾವಣೆ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಬಿಜೆಪಿ ರಾಜ್ಯಾಧ್ಯಕ್ಷರು, ಷರಿಷತ್ತು ಚುನಾವಣೆಯನ್ನು ಪಕ್ಷ ಗಂಭೀರವಾಗಿ ಪರಿಗಣಿಸಿದೆ ಎಂದರು.
ಕಾಂಗ್ರೆಸ್ ಪಕ್ಷದಲ್ಲಿ ರಾಷ್ಟ್ರೀಯ ಅಧ್ಯಕ್ಷರಿಂದ ಹಿಡಿದು ರಾಜ್ಯಾಧ್ಯಕ್ಷರವರೆಗೆ ಬೇಲ್ ಮೇಲೆ ಇದ್ದಾರೆ. ರಾಹುಲ್ ಗಾಂಧಿ ಮಾದಕದ್ರವ್ಯ ವ್ಯಸನಿ ಎಂಬುದನ್ನು ಮಾಧ್ಯಮಗಳು ಹೇಳಿವೆ. ಇನ್ನೊಂದು ಕಡೆ ವಿಶ್ವ ಮೆಚ್ಚುವ ರೀತಿ ಆಡಳಿತ ನೀಡುತ್ತಿರುವ ಪ್ರಧಾನಿ ಮೋದಿಯವರ ಬಗ್ಗೆ ಜನಮನ್ನಣೆ ಹೆಚ್ಚುತ್ತಿದೆ. ಮೋದಿಯವರು ಸಬ್ ಕಾ ಸಥ್ ಸಬ್ ಕಾ ವಿಕಾಸ ಎಂದರೆ, ಮುಸ್ಲಿಮರ ಅಭಿವೃದ್ಧಿ ಯೊಂದೇ ಎಂಬಂತೆ ವರ್ತಿಸುತ್ತಿದ್ದಾರೆ ಎಂದು ಆರೋಪಿಸಿದರು.