ಬೆಂಗಳೂರು: ಸರ್ಕಾರಿ ಸ್ಥಳಗಳಲ್ಲಿ ಶಾಖೆ, ಸಾಂಘಿಕ್ ಅಥವಾ ಬೈಠಕ್ ಹೆಸರಿನಲ್ಲಿ ಆರ್‌ಎಸ್‌ಎಸ್ ಚಟುವಟಿಕೆಗೆ ನಿಷೇಧ ಹೇರಬೇಕೆಂಬ ವಿಚಾರ ಸಂಬಂಧ ಕಾಂಗ್ರೆಸ್ ಹಾಗೂ ಬಿಜೆಪಿ ನಾಯಕರ ನಡುವೆ ಜಟಾಪಟಿಗೆ ಕಾರಣವಾಗಿದೆ.
ಇದೀಗ ಈ ವಿಚಾರ ಸಂಬಂಧ ವಿಧಾನ ಪರಿಷತ್ ಸದ್ಯ ಬಿಕೆ ಹರಿಪ್ರಸಾದ್ ಅವರು ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಬರೆದುಕೊಂಡಿದ್ದಾರೆ.
ಪೋಸ್ಟ್‌ನಲ್ಲಿ ಹೀಗಿದೆ: ಬಿ.ಎಲ್. ಸಂತೋಷ್ ಅವರೇ, ಕೈಯಲ್ಲಿ ದೊಣ್ಣೆ ಹಿಡಿದು ಜನರಲ್ಲಿ ಭಯ ಹುಟ್ಟಿಸಬಹುದೇ ಹೊರತು ಭರವಸೆ ಮೂಡಿಸಲು ಸಾಧ್ಯವಿಲ್ಲ. ದೇಶದ ಜನರಲ್ಲಿ ಆತ್ಮವಿಸ್ವಾಸ, ಧೈರ್ಯ, ಭರವಸೆ ಮೂಡಿಸಿರುವುದು ಬಾಬಾ ಸಾಹೇಬರು ನೀಡಿರುವ ಸಂವಿಧಾನದಿಂದ ಮಾತ್ರ. ಪಥಸಂಚಲನ ಸಾಗುವ ದ್ವೇಷದ ಬೀದಿಯಲ್ಲಿ ಪ್ರೀತಿ ಹುಟ್ಟವುದಾದರೂ ಹೇಗೆ?, ದೊಣ್ಣೆ, ಲಾಠಿ, ಬೂಟಿನ ಪಥಸಂಚಲನದಿಂದ ಸಮಾಜದಲ್ಲಿ ಭಯ, ದ್ವೇಷದ ವಾತಾವರಣ ಸೃಷ್ಟಿಸಲಾಗುತ್ತಿದೆ. ಪಥಸಂಚಲನದ ಉದ್ದೇಶವೇ ಭಯದ ವಾತಾವರಣದ ನಿರ್ಮಾಣ ಎನ್ನುವುದು ಸ್ಪಷ್ಟ.
ಆರ್‌ಎಸ್‌ಎಸ್ ಪೇಯ್ಡ್ ಸಂಘಟನೆಯಲ್ಲ ಎಂದಾದರೇ ದೇಶ-ವಿದೇಶಿ ಮೂಲದಿಂದಲೂ ಹರಿದು ಬರುತ್ತಿರುವ ಹಣಕ್ಕೆ ಹೊಣೆ ಯಾರು?, ಸಮಾಜ ಸೇವೆ ಮಾಡಲು ಆರ್‌ಎಸ್‌ಎಸ್ ಸರ್ಕಾರಿ ಸಂಸ್ಥೆಯೂ ಅಲ್ಲ, ಸರ್ಕಾರೇತರ ಸಂಸ್ಥೆಯೂ ಅಲ್ಲ, ಕನಿಷ್ಟ ನೊಂದಾವಣಿಯೂ ಆಗಿಲ್ಲ. ಹಾಗಾದರೆ ಇದೊಂದು ಭೂಗತ ಸಂಘಟನೆ ಅಲ್ಲವೇ?, ವಿದೇಶದಿಂದ ಆರ್‌ಎಸ್‌ಎಸ್‌ಗೆ ಮಾತ್ರ ಹಣ ಬರಲಿ ಎಂಬ ಕಾರಣಕ್ಕಾಗಿಯೇ ಅಲ್ಲವೇ ಎನ್‌ಜಿಓಗಳಿಗೆ ವಿದೇಶಿ ಫಂಡ್ ಬರುವುದನ್ನು ನಿಲ್ಲಿಸಿರುವುದು ಎಂದು ಅವರು ಪ್ರಶ್ನಿಸಿದ್ದಾರೆ.
ನೂರು ವರ್ಷದ ಇತಿಹಾಸದಲ್ಲಿ ದೊಣ್ಣೆ ಹಿಡಿದು ಸಾಗಿರುವ ಪಥಸಂಚಲನದಿಂದ ಸಮಾಜಕ್ಕೆ ಆಗಿರುವ ಲಾಭವೇನು?, ಹಾದಿ ಬೀದಿಯಲ್ಲಿ ದೊಣ್ಣೆ ಹಿಡಿದು ಶಾಂತಿ-ಸುವ್ಯವಸ್ಥೆಯನ್ನು ಹಾಳು ಮಾಡಿದ್ದೇ ಸಾಧನೆಯೇ?, ದೊಣ್ಣೆ ಜನರ ಕೈಗೆ ಸಿಕ್ಕಿ ಬಡಿಸಿಕೊಳ್ಳಬೇಡಿ, ಬೇಗ ಎಚ್ಚೆತ್ತುಕೊಳ್ಳದಿದ್ದರೇ ಸಂಘಕ್ಕೆ ಉಳಿಗಾಲವಿಲ್ಲ ಎಂದು ಹರಿಪ್ರಸಾದ್ ವಾಗ್ದಾಳಿ ನಡೆಸಿದ್ದಾರೆ.
ಕೈಯಲ್ಲಿ ದೊಣ್ಣೆ ಹಿಡಿದು ಜನರಲ್ಲಿ ಭಯ ಹುಟ್ಟಿಸಬಹುದೇ ಹೊರತು ಭರವಸೆ ಮೂಡಿಸಲು ಸಾಧ್ಯವಿಲ್ಲ @blsanthosh ಅವರೇ, ದೇಶದ ಜನರಲ್ಲಿ ಆತ್ಮವಿಸ್ವಾಸ, ಧೈರ್ಯ, ಭರವಸೆ ಮೂಡಿಸಿರುವುದು ಬಾಬಾ ಸಾಹೇಬರು ನೀಡಿರುವ ಸಂವಿಧಾನದಿಂದ ಮಾತ್ರ ಎಂದು ಬರೆದಿದ್ದಾರೆ.