ಜನಾರ್ದನ ಪೂಜಾರಿ ವಿರುದ್ಧ ಕಾಂಗ್ರೆಸ್ ಮುಖಂಡನ ಆಕ್ರೋಶ

ಸೋಮವಾರ, 9 ಜನವರಿ 2017 (19:26 IST)
ಪದೇ ಪದೇ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರಕಾರವನ್ನು ಟೀಕಿಸುತ್ತಿದ್ದ ಹಿರಿಯ ಕಾಂಗ್ರೆಸ್ ನಾಯಕ ಜನಾರ್ದನ ಪೂಜಾರಿ ಅವರನ್ನು ಕಾಂಗ್ರೆಸ್ ಮುಖಂಡ ಕ್ಸೆವಿಯರ್ ಡಿಮೆಲ್ಲೋ ತರಾಟೆಗೆ ತೆಗೆದುಕೊಂಡರು. 
 
ಕಾರ್ಕಳದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಕ್ಷ ಸಂಘಟಿಸದೇ ಪದೇ ಪದೇ ರಾಜ್ಯ ಸರಕಾರವನ್ನು ಟೀಕಿಸುವ ಜನಾರ್ದನ ಪೂಜಾರಿಯಿಂದ ಕಾಂಗ್ರೆಸ್‌ಗೇನು ಲಾಭ? ಎನ್ನುವುದನ್ನು ನಾವೀಗ ಪ್ರಶ್ನಿಸಬೇಕಾಗುತ್ತದೆ. ಪೂಜಾರಿ ಅವರು ತಮ್ಮ ಹಳೆ ಚಾಳಿಯನ್ನು ಮುಂದುವರೆಸಿದರೆ ಕಾಂಗ್ರೆಸ್‌ನ ಎಲ್ಲಾ ಕಾರ್ಯಕರ್ತರು ಪ್ರತಿಭಟಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.  
 
ಸ್ವಪಕ್ಷ ವಿರೋಧಿ ಹೇಳಿಕೆಗಳ ಮೂಲಕ ಕಾಂಗ್ರೆಸ್ ಕಾರ್ಯಕರ್ತರನ್ನು ಮುಜುಗರಕ್ಕೀಡು ಮಾಡುತ್ತಿದ್ದಾರೆ. ಪೂಜಾರಿ ವಿರುದ್ಧ ಹೈಕಮಾಂಡ್ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು. 
 
ಸಿಎಂ ಸಿದ್ದರಾಮಯ್ಯ ವಿರುದ್ಧ ಪದೇ ಪದೇ ಆರೋಪ ಮಾಡುವ ಮೂಲಕ ಬಿಜೆಪಿಗೆ ಪರೋಕ್ಷವಾಗಿ ಬೆಂಬಲ ನೀಡುತ್ತಿದ್ದಾರೆ. ಮುಖ್ಯಮಂತ್ರಿ ಸ್ಥಾನ ಬದಲಾಯಿಸಿ ಎಂದು ಸಲಹೆ ನೀಡುವ ಬದಲು, ತಾವೇ ಅಧಿಕಾರ ಸ್ವೀಕರಿಸಿ ಕಾರ್ಯನಿರ್ವಹಿಸಬಹುದಲ್ಲವೇ ಎಂದು  ಕಾಂಗ್ರೆಸ್ ಮುಖಂಡ ಕ್ಸೆವಿಯರ್ ಡಿಮೆಲ್ಲೋ ಸವಾಲ್ ಎಸೆದಿದ್ದಾರೆ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ