ಬೆಂಗಳೂರು(ಆ.03): ಕೇರಳದ ಕೋವಿಡ್ ಸೋಂಕಿನ ಮಾರಕ ಪ್ರಭಾವ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಭಾರಿ ಪ್ರಮಾಣದಲ್ಲಿ ಕಾಣತೊಡಗಿದೆ. ರಾಜ್ಯದಲ್ಲಿ ಪ್ರಸ್ತುತ ಅತಿ ಹೆಚ್ಚು ಸೋಂಕು ಇರುವ 20 ಹಳ್ಳಿಗಳ ಪೈಕಿ 11 ಗ್ರಾಮಗಳು ಅವಿಭಜಿತ ದಕ್ಷಿಣ ಕನ್ನಡಕ್ಕೆ ಸೇರಿವೆ. ಅದೇ ರೀತಿ ಪಟ್ಟಣಗಳನ್ನು ಗಮನಿಸಿದರೆ ರಾಜ್ಯಾದ್ಯಂತ ಕೆಲ ಪಟ್ಟಣಗಳು ಕೋವಿಡ್ ಹಾಟ್ಸ್ಪಾಟ್ಗಳಾಗಿವೆ.
ಕಳೆದ ಏಳು ದಿನದಲ್ಲಿ ಹೊಸ ಪ್ರಕರಣಗಳು ಅತಿ ಹೆಚ್ಚು ಏರಿಕೆ ಆಗಿರುವ ಹಳ್ಳಿಗಳಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ 6 ಮತ್ತು ಉಡುಪಿ ಜಿಲ್ಲೆಯ 5 ಗ್ರಾಮಗಳಿವೆ. ಕೊಡಗಿನ ಎರಡು, ಹಾಸನ, ಉತ್ತರ ಕನ್ನಡ, ಚಿಕ್ಕಬಳ್ಳಾಪುರ, ಮಂಡ್ಯ, ಬೆಂಗಳೂರು ನಗರ, ಚಿಕ್ಕಮಗಳೂರು ಜಿಲ್ಲೆಯ ತಲಾ ಒಂದು ಗ್ರಾಮದಲ್ಲಿ ಸೋಂಕಿತರ ಸಂಖ್ಯೆ ಭಾರಿ ಪ್ರಮಾಣದಲ್ಲಿ ಏರಿಕೆ ಕಂಡಿದೆ.
ದಕ್ಷಿಣ ಕನ್ನಡ ಜಿಲ್ಲೆಯ ಗುತ್ತಿಗಾರು, ಮಲವೂರು ಮತ್ತು ಮುಂಡೂರ ಗ್ರಾಮಗಳು ಮೊದಲ ಮೂರು ಸ್ಥಾನದಲ್ಲಿವೆ. ನಂತರದ ಸ್ಥಾನದಲ್ಲಿ ಉಡುಪಿ ಜಿಲ್ಲೆಯ ಕೊಲ್ಲೂರು ಮತ್ತು ಪೆರ್ಡೂರು ಹಾಗೂ ಉತ್ತರ ಕನ್ನಡದ ಹೊನ್ನಾವರ ಗ್ರಾಮಗಳಿವೆ.
ಹಿಂದಿನ ಒಂದು ವಾರದಲ್ಲಿ ಒಂದೇ ಒಂದು ಪ್ರಕರಣ ಇರದಿದ್ದ ಗುತ್ತಿಗಾರಿನಲ್ಲಿ 14 ಪ್ರಕರಣ ಪತ್ತೆಯಾಗಿದ್ದು ಹಿಂದಿನ ವಾರಕ್ಕೆ ಹೋಲಿಸಿದರೆ ಈ ವಾರ ಶೇ.1400ರಷ್ಟುಸೋಂಕು ಹೆಚ್ಚಾಗಿದೆ. ಹಾಗೆಯೇ ಹಿಂದಿನ ವಾರದಲ್ಲಿ ಕೇವಲ 1 ಪ್ರಕರಣವಿದ್ದ ಮಲವೂರು, ಮುಂಡೂರು, ಕೊಲ್ಲೂರು, ಪೆರ್ಡೂರು ಗ್ರಾಮದಲ್ಲಿ ಹೊಸದಾಗಿ 12 ಪ್ರಕರಣ ಪತ್ತೆಯಾಗಿವೆ. ಒಂದೇ ಒಂದು ಸೋಂಕಿತರಿರದಿದ್ದ ಹೊನ್ನಾವರದಲ್ಲಿ ಈ ವಾರ 12 ಪ್ರಕರಣ ಕಂಡುಬಂದಿದ್ದು ಶೇ.1200ರಷ್ಟುಪ್ರಕರಣ ಏರಿಕೆ ಕಂಡಿದೆ.
ಉಳಿದಂತೆ ದಕ್ಷಿಣ ಕನ್ನಡದ ಚಾರ್ಮಾಡಿ, ಅಮ್ಟಾಡಿ, ಇಂದಬೆಟ್ಟು ಗ್ರಾಮದಲ್ಲಿ ಹೆಚ್ಚು ಪ್ರಕರಣ ದಾಖಲಾಗಿವೆ. ಉಡುಪಿಯ ಬೊಮ್ಮರಬೆಟ್ಟು, ಹೊಸಂಗಡಿ, ನಿಟ್ಟೆ, ಚಿಕ್ಕಬಳ್ಳಾಪುರ ಜಿಲ್ಲೆಯ ಕುರುಬರಹಳ್ಳಿ, ಹಾಸನದ ನುಗ್ಗೆಹಳ್ಳಿ, ಮಂಡ್ಯದ ಅಗ್ಲೆ, ಕೊಡಗಿನ ಭಾಗಮಂಡಲ, ಚೆರಳ ಶ್ರೀಮಂಗಲ, ಚಿಕ್ಕಮಗಳೂರಿನ ನಾಗಲಪುರ, ಚಾಮರಾಜನಗರದ ಹುತ್ತೂರು ಗ್ರಾಮದಲ್ಲಿ ಅಪಾಯಕಾರಿ ಪ್ರಮಾಣದಲ್ಲಿ ಕೋವಿಡ್ ಸೋಂಕು ಕಂಡು ಬಂದಿದೆ.
ರಾಜ್ಯದ ಹನ್ನೊಂದು ಗ್ರಾಮಗಳಲ್ಲಿ ಶೇ.1000 ಮೀರಿ ಸೋಂಕಿತರು ಪತ್ತೆಯಾಗಿದ್ದಾರೆ. ಬೆಂಗಳೂರು ನಗರದ ಬೊಮ್ಮನಹಳ್ಳಿಯಲ್ಲಿ ಈ ವಾರ 10 ಮಂದಿ ಸೋಂಕಿತರು ಪತ್ತೆಯಾಗಿದ್ದಾರೆ. ಅತಿ ಹೆಚ್ಚು ಸೋಂಕು ಪತ್ತೆಯಾಗಿರುವ ಗ್ರಾಮಗಳಲ್ಲಿ ಉತ್ತರ ಕರ್ನಾಟಕ ಮತ್ತು ಮಧ್ಯ ಕರ್ನಾಟಕದ ಒಂದೇ ಒಂದು ಹಳ್ಳಿಗಳಿಲ್ಲ. ದ.ಕ. 4 ಪಟ್ಟಣಗಳಲ್ಲೂ ಸೋಂಕು:
ಪಟ್ಟಣಗಳಲ್ಲಿ ಸೋಂಕು ರಾಜ್ಯಾದ್ಯಂತ ಪತ್ತೆಯಾಗಿದೆ. ಅತಿ ಹೆಚ್ಚು ಸೋಂಕು ಪತ್ತೆಯಾದ 20 ಪಟ್ಟಣಗಳಲ್ಲಿ ದಕ್ಷಿಣ ಕನ್ನಡದ ನಾಲ್ಕು, ಉತ್ತರ ಕನ್ನಡದ ಮೂರು, ಕೊಡಗು ಮತ್ತು ಬೆಳಗಾವಿಯ ಎರಡು, ಚಿತ್ರದುರ್ಗ, ಚಿಕ್ಕಮಗಳೂರು, ಬಳ್ಳಾರಿ, ಬೀದರ್, ಕಲಬುರಗಿ, ಉಡುಪಿ ಮತ್ತು ಕೋಲಾರ ಜಿಲ್ಲಾ ವ್ಯಾಪ್ತಿಯ ತಲಾ ಒಂದು ಪಟ್ಟಣಗಳಿವೆ.
ಅತಿ ಹೆಚ್ಚು ಸೋಂಕು ಕೊಪ್ಪಳ (ಶೇ.1100), ದಾವಣಗೆರೆಯ ಹರಿಹರ (ಶೇ.750), ಬೆಳಗಾವಿಯ ಹುಕ್ಕೇರಿ (ಶೇ.500), ಉತ್ತರ ಕನ್ನಡದ ಯಲ್ಲಾಪುರ (ಶೇ.333), ಕೋಲಾರದ ಮಾಲೂರು (ಶೇ.260) ಪಟ್ಟಣದಲ್ಲಿ ಪತ್ತೆಯಾಗಿದೆ. ಹಳ್ಳಿಗಳಲ್ಲಿ ಸೋಂಕು ಪತ್ತೆಯಲ್ಲಿ ಕರಾವಳಿ ಜಿಲ್ಲೆಗಳು ಮುಂದಿದ್ದರೆ, ಪಟ್ಟಣಗಳಲ್ಲಿ ಹೊಸ ಸೋಂಕಿತರು ಪತ್ತೆಯಾಗುವುದರಲ್ಲಿ ಉತ್ತರ ಕರ್ನಾಟಕದ ಪಟ್ಟಣಗಳು ಮುಂದಿವೆ. ಕೋವಿಡ್ ಹಾಟ್ಸ್ಪಾಟ್:
ದಕ್ಷಿಣ ಕನ್ನಡದ ಕೋಟೆಕಾರ್, ಬಂಟ್ವಾಳ, ಸುಳ್ಯ ಮತ್ತು ಪುತ್ತೂರು, ಉತ್ತರ ಕನ್ನಡದ ಶಿರಸಿ, ಕಾರವಾರ, ಕೊಡಗಿನ ಕುಶಾಲನಗರ ಮತ್ತು ಮಡಿಕೇರಿ, ಚಿತ್ರದುರ್ಗದ ಹಿರಿಯೂರು, ಕಲಬುರಗಿ, ಬೀದರ್, ಉಡುಪಿಯ ಕುಂದಾಪುರ, ಬಳ್ಳಾರಿ, ಬೆಳಗಾವಿಯ ರಾಯಭಾಗ, ಚಿಕ್ಕಮಗಳೂರಿನ ಎನ್.ಆರ್. ಪುರ, ಚಿತ್ರದುರ್ಗದ ಹಿರಿಯೂರು ಪಟ್ಟಣಗಳು ಕೋವಿಡ್ ಹಾಟ್ಸ್ಪಾಟ್ಗಳಾಗಿವೆ.