ಕೊರೊನಾ ತಡೆಗಟ್ಟುವ ನಿಟ್ಟಿನಲ್ಲಿ ಹೋಂ ಕ್ವಾರಂಟೈನ್ ನಲ್ಲಿರುವ ವ್ಯಕ್ತಿಗಳು ಗೃಹ ಬಂಧನ ಉಲ್ಲಂಘಿಸಿ ಸಾರ್ವಜನಿಕವಾಗಿ ಓಡಾಡಿದಲ್ಲಿ ಅಂತಹವರ ಮೇಲೆ ಪೊಲೀಸ್ ಠಾಣೆಯಲ್ಲಿ ಎಫ್.ಐ.ಆರ್. ದಾಖಲಿಸಲಾಗುವುದು.
ಹೀಗಂತ ಕಲಬುರಗಿ ಜಿಲ್ಲಾಧಿಕಾರಿ ಶರತ್ ಬಿ. ಎಚ್ಚರಿಕೆ ನೀಡಿದ್ದಾರೆ.
ಕೋವಿಡ್-19 ಸೋಂಕಿತ ವ್ಯಕ್ತಿಯ ಎರಡನೇ ಸಂಪರ್ಕದಲ್ಲಿ ಬಂದ ವ್ಯಕ್ತಿಗಳನ್ನು, ಹೊರ ರಾಜ್ಯದಿಂದ ಬಂದ ಗರ್ಭಿಣಿಯರು, 10 ವರ್ಷದೊಳಗಿನ ಮಕ್ಕಳು, 65ವರ್ಷ ಮೇಲ್ಪಟ್ಟ ಹಿರಿಯರು & ಇನ್ನಿತರ ರೋಗಗಳಿಂದ ಬಳಲುತ್ತಿರುವವರ ಹಿತದೃಷ್ಟಿಯಿಂದ ಸಾಂಸ್ಥಿಕ ಕ್ವಾರಂಟೈನ್ ಬದಲಾಗಿ ಹೋಂ ಕ್ವಾರಂಟೈನ್ ನಲ್ಲಿ ಇಡಲಾಗುತ್ತಿದೆ.
ಆದರೆ ಕೆಲವರು ಹೋಂ ಕ್ವಾರಂಟೈನ್ ಉಲ್ಲಂಘಿಸಿ ಸಾರ್ವಜನಿಕವಾಗಿ ಓಡಾಡುತ್ತಿರುವುದು ಗಮನಕ್ಕೆ ಬಂದಿದೆ. ಮೊದಲ ಬಾರಿಗೆ ಈ ರೀತಿಯಾಗಿ ಉಲ್ಲಂಘನೆ ಮಾಡಿರುವುದು ಕಂಡುಬಂದಲ್ಲಿ ಕೂಡಲೆ ಅಂತವರನ್ನು ಸಾಂಸ್ಥಿಕ ಕ್ವಾರಂಟೈನ್ ಗೆ ದಾಖಲಿಸಲಾಗುತ್ತದೆ. ಮೇಲಿಂದ ಮೇಲೆ ಇದೇ ರೀತಿ ತಪ್ಪು ಮರುಕಳುಹಿಸಿದಲ್ಲಿ ಅಂತಹವರ ಮೇಲೆ ಸಂಬಂಧಿಸಿದ ಪೊಲೀಸ್ ಠಾಣೆಯಲ್ಲಿ ಎಫ್.ಐ.ಆರ್. ದಾಖಲಿಸಲಾಗುವುದು ಎಂದು ಡಿ.ಸಿ. ಶರತ್ ಬಿ. ತಿಳಿಸಿದ್ದಾರೆ.