ಬೆಳೆಸಾಲ ಮನ್ನಾ: ರೈತರೇ ಹೆಸರು ನೋಂದಣಿ ಮಾಡಿಕೊಳ್ಳಿ
ಭಾನುವಾರ, 2 ಡಿಸೆಂಬರ್ 2018 (18:11 IST)
ಬೆಳೆ ಸಾಲ ಮನ್ನಾ ಯೋಜನೆಯಡಿ ನೋಂದಾಯಿಸಿಕೊಳ್ಳಲು 2017 ರೊಳಗಾಗಿ ಬೆಳೆ ಸಾಲ ಪಡೆದ ಪ್ರತಿಯೊಬ್ಬ ರೈತರು ತಾವು ಸಾಲ ಪಡೆದ ವಾಣಿಜ್ಯ ಬ್ಯಾಂಕ್ಗಳಿಗೆ ಅಥವಾ ಸಮೀಪದಲ್ಲಿರುವ ನಾಡ ಕಛೇರಿಗೆ ಭೇಟಿ ನೀಡಿ ತಮ್ಮ ಹೆಸರುಗಳನ್ನು ನೊಂದಾಯಿಸಿಕೊಳ್ಳಲು ಸೂಚಿಸಲಾಗಿದೆ.
ವಾಣಿಜ್ಯ ಬ್ಯಾಂಕ್ಗಳಲ್ಲಿ ರೈತರು ಮಾಡಿರುವ ಸಾಲವನ್ನು ಮನ್ನಾ ಮಾಡುವ ಸಲುವಾಗಿ ಕರ್ನಾಟಕ ಸರಕಾರವು ಒಂದು ತಂತ್ರಾಂಶವನ್ನು ತಂದಿದ್ದು, ಅದಕ್ಕಾಗಿ ಕಲಬುರಗಿ ಜಿಲ್ಲೆಯ ಸೇಡಂ ತಾಲ್ಲೂಕಾದಲ್ಲಿ ಪ್ರಾಯೋಗಿಕವಾಗಿ ಈಗಾಗಲೇ ಜಾರಿಯಲ್ಲಿರುತ್ತದೆ. ಈ ಯೋಜನೆಯಡಿ ರೈತರು ತಮ್ಮ ಹೆಸರುಗಳನ್ನು ನೋಂದಾಯಿಸಿಕೊಳಲು ಸಾಕಷ್ಟು ಸಮಯಾವಕಾಶ ನೀಡಿದ್ದು, ಯೋಜನೆಗೆ ಹೆಸರು ನೋಂದಾಯಿಸಲು ಡಿಸೆಂಬರ್ 10 ರ ವರೆಗೆ ಸಮಯ ನಿಗದಿಪಡಿಸಿದ್ದು, ಪ್ರಯುಕ್ತ ಬ್ಯಾಂಕುಗಳ ಅಥವಾ ನಾಡ ಕಛೇರಿಯ ಕಾರ್ಯವೇಳೆಯ ಸಮಯದ ಯಾವುದೇ ದಿನದಲ್ಲಿ ಬಂದು ರೈತರು ತಮ್ಮ ಹೆಸರುಗಳನ್ನು ನೋಂದಾಯಿಸಿಕೊಳ್ಳಬಹುದು.
ಪ್ರತಿಯೊಬ್ಬ ಬೆಳೆ ಸಾಲ ಪಡೆದ ರೈತರು ಕಡ್ಡಾವಾಗಿ ತಮ್ಮ ಆಧಾರ ಕಾರ್ಡ, ರೇಷನ್ ಕಾರ್ಡ ಪ್ರತಿಗಳನ್ನು ಮತ್ತು ತಾವು ಸಾಲ ಪಡೆದ ಸರ್ವೆ ನಂಬರನ ಮಾಹಿತಿ ತಪ್ಪದೇ ಸಲ್ಲಿಸುವುದು.ಪಹಣಿ ಪತ್ರಿಕೆ ಸಲ್ಲಿಸುವ ಅವಶ್ಯಕತೆ ಇಲ್ಲ.
01.04.2009 ರಂದು ಮತ್ತು ನಂತರದ ದಿನಗಳಲ್ಲಿ ಮಂಜೂರಾದ ಬೆಳೆಸಾಲಗಳು ಮತ್ತು 31.12.2017 ರ ವರೆಗೆ ಬಾಕಿ ಇರುವ ಬೆಳೆಸಾಲಗಳು ಅಂದರೆ ಸುಸ್ತಿಸಾಲ, ಪುನರಾವಸ್ತಿ ಸಾಲ, ಎನ್.ಪಿ.ಎ ಸಾಲಗಳು ಮನ್ನಾಕ್ಕೆ ಅರ್ಹವಾಗಿರುತ್ತವೆ.
ಕೇವಲ ವೈಯಕ್ತಿಕ ಬೆಳೆಸಾಲ ಪಡೆದ ರೈತರು ಮಾತ್ರ ಅರ್ಹರಿರುತ್ತಾರೆ.ಒಂದು ಕುಟುಂಬವು (ಅಂದರೆ ಗಂಡ+ಹೆಂಡತಿ+ಅವಲಂಬಿತ ಮಕ್ಕಳು) ಗರಿಷ್ಠ 2.00 ಲಕ್ಷದ ವರೆಗೆ ಮಾತ್ರ ಬೆಳೆ ಸಾಲ ಮನ್ನಾ ಪಡೆಯಲು ಅರ್ಹರಿರುತ್ತಾರೆ. ಇದಕ್ಕಾಗಿ ದಿನಾಂಕ:05.07.2018 ಕ್ಕಿಂತ ಮುಂಚಿತವಾಗಿ ಪಡೆದ ರೇಷನ್ ಕಾರ್ಡನ್ನು ಕಡ್ಡಾಯವಾಗಿ ಸಲ್ಲಿಸುವುದು ಅವುಗಳನ್ನು ಮಾತ್ರ ಪರಿಗಣಿಸಲಾಗುವುದು.