ಲೋಕಸಭಾ ಚುನಾವಣಾ ಹೊಸ್ತಿಲಲ್ಲಿ ಕೋಟಿ ಕೋಟಿ ಹಣ ಪತ್ತೆಯಾಗಿರುವುದು ಬೆಚ್ಚಿ ಬೀಳಿಸಿದೆ.
ಚುನಾವಣೆಗೆ ಒಂದೆಡೆ ರಾಜಕೀಯ ಪಕ್ಷಗಳು ಭರ್ಜರಿ ಕ್ಯಾಂಪೇನ್ ನಡೆಸುತ್ತಿದ್ದರೆ ಇತ್ತ ಐಟಿ ಇಲಾಖೆಯ ಅಧಿಕಾರಿಗಳು ಚುನಾವಣೆಗೆ ಹಣ ಸಾಗಿಸುವವರ ಮೇಲೆ ಕಣ್ಣಿಟ್ಟಿದ್ದಾರೆ. ಹೀಗಿರುವಾಗ ಗುತ್ತಿಗೆದಾರರಿಂದ ಕಂತೆ ಕಂತೆ ಹಣ ಪಡೆಯುತ್ತಿದ್ದ ಗ್ರಾಮೀಣಾಭಿವೃದ್ದಿ ಇಲಾಖೆಯ ಎಕ್ಸಿಕ್ಯೂಟಿವ್ ಇಂಜಿನಿಯರ್ ನಾರಾಯಣಗೌಡ ಪಾಟೀಲ್ ಐಟಿ ಅಧಿಕಾರಿಗಳ ಬಲೆಗೆ ಬಿದ್ದಿದ್ದಾರೆ.
ಗುತ್ತಿಗೆದಾರರಿಂದ ಕೋಟಿ ಕೋಟಿ ಹಣ ಪಡೆಯುತ್ತಿದ್ದ ನಾರಾಯಣಗೌಡ ಪಾಟೀಲ್ ಬೆಂಗಳೂರಿನ ಆನಂದ್ ರಾವ್ ಸರ್ಕಲ್ ನಲ್ಲಿರುವ ಖಾಸಗಿ ಹೋಟೆಲ್ ನ 2 ಕೋಣೆಗಳಲ್ಲಿ ಸಂಗ್ರಹಿಸಿಟ್ಟಿದ್ದರು. ಅಲ್ಲದೇ ಈ ಕಲೆಕ್ಷನ್ ರಾಜಕಾರಣಿಗಳಿಗೆ ಚುನಾವಣೆ ಖರ್ಚಿಗೆಂದೇ ಮಾಡಲಾಗುತ್ತಿತ್ತು ಎಂಬ ಮಾಹಿತಿಯೂ ಲಭ್ಯವಾಗಿದೆ. ಆದರೆ ಈ ಗ್ರಾಮೀಣಾಭಿವೃದ್ಧಿ ಅಧಿಕಾರಿಯ ಮೇಲೆ ಕಣ್ಣಿಟ್ಟಿದ್ದ ಐಟಿ ಅಧಿಕಾರಿಗಳು ಬೆಂಗಳೂರು ಮತ್ತು ಹಾವೇರಿಯಲ್ಲಿ ಏಕಕಾಲಕ್ಕೆ ದಾಳಿ ನಡೆಸಿದ್ದರು.
ಕೋಟಿ ಕೋಟಿ ದುಡ್ಡು ಪತ್ತೆ: ದಾಳಿ ನಡೆಸಿದ ಅಧಿಕಾರಿಗಳಿಗೆ ಬೆಂಗಳೂರಿನ ಹೋಟೆಲ್ ರೂಮಿನಲ್ಲಿ 2 ಕೋಟಿ ರೂಪಾಯಿಗೂ ಹೆಚ್ಚು ಹಣ ಸಿಕ್ಕಿದ್ದರೆ, ಹಾವೇರಿಯ ಮನೆಯಲ್ಲಿ 25 ಲಕ್ಷ ರೂಪಾಯಿಗೂ ಹೆಚ್ಚು ನಗದು ಲಭಿಸಿದೆ. ಇನ್ನು ಐಟಿ ದಾಳಿಯ ಸುಳಿವು ಸಿಗುತ್ತಿದ್ದಂತೆ ಹೊಟೇಲ್ ನಲ್ಲಿದ್ದ ನಾರಾಯಣಗೌಡ ಪರಾರಿಯಾಗಿದ್ದಾರೆ ಆದರೆ ಅವರ ಕಾರ್ ಡ್ರೈವರ್ ನನ್ನು ಬಂಧಿಸುವಲ್ಲಿ ಅಧಿಕಾರಿಗಳು ಯಶಸ್ವಿಯಾಗಿದ್ದಾರೆ.
ಸದ್ಯ ಅಧಿಕಾರಿಗಳು ನಾರಾಯಣಗೌಡನ ಹುಡುಕಾಟ ನಡೆಸುತ್ತಿದ್ದು, ಈ ದುಡ್ಡು ಯಾರಿಗಾಗಿ ಸಂಗ್ರಹಿಸಲಾಗುತ್ತಿತ್ತು? ಯಾವೆಲ್ಲಾ ರಾಜಕಾರಣಿಗಳೊಂದಿಗೆ ಸಂಪರ್ಕ ಹೊಂದಿದ್ದರು? ಈವರೆಗೆ ಚುನಾವಣೆಗಾಗಿ ಎಷ್ಟು ಹಣ ಕೊಟ್ಟಿದ್ದಾರೆ ಎಂಬಿತ್ಯಾದಿ ಮಾಹಿತಿಯನ್ನು ಕಲೆ ಹಾಕುತ್ತಿದ್ದಾರೆ.