2022 ಮುಗಿದು ನೂತನ ವರ್ಷಕ್ಕೆ ಕಾಲಿಟ್ಟ ಹಿನ್ನೆಲೆಯಲ್ಲಿ ಚಾಮರಾಜನಗರ ಜಿಲ್ಲಾದ್ಯಂತ ಸಂಭ್ರಮಾಚರಣೆಗಳು ಜೋರಾಗಿ ನಡೆದಿದ್ದು ಪ್ರವಾಸಿ ತಾಣಗಳು ತುಂಬಿ ತುಳುಕುತ್ತಿವೆ. ವರ್ಷರಂಭ ಭಾನುವಾರವೇ ಬಂದ ಹಿನ್ನೆಲೆಯಲ್ಲಿ ರಜೆ ಜೊತೆಗೆ ನ್ಯೂ ಇಯರ್ ಸೆಲೆಬ್ರೇಷನ್ಗೆ ಹೊಸ ಕಳೆ ಬಂದಂತಿತ್ತು. ಗುಂಡ್ಲುಪೇಟೆ ತಾಲೂಕಿನ ಬಂಡೀಪುರ, ಹಿಮವದ್ ಗೋಪಾಲಸ್ವಾಮಿ ಬೆಟ್ಟ, ಯಳಂದೂರಿನ ಬಿಳಿಗಿರಿರಂಗನನಾಥ ದೇವಾಲಯ, ಚಾಮರಾಜನಗರ ತಾಲೂಕಿನ ಕೆ.ಗುಡಿ, ಹನೂರು ತಾಲೂಕಿನ ಮಲೆಮಹದೇಶ್ವರ ಬೆಟ್ಟದಲ್ಲಿ ಜನಸಾಗರವೇ ಹರಿದುಬಂದಿದೆ. ವರ್ಷದ ಕೊನೆಯ ದಿನವಾದ ಶನಿವಾರ ಮಲೆಮಹದೇಶ್ವರ ಬೆಟ್ಟದಲ್ಲಿ ನೂರಾರು ಭಕ್ತರು ಚಿನ್ನದ ರಥ ಎಳೆದು ಪುನೀತರಾಗಿದ್ದು, ನೂತನ ವರ್ಷಕ್ಕೆ ವಿವಿಧ ಪ್ರಾರ್ಥನೆಗಳನ್ನು ಸಲ್ಲಿಸಿ ಮಲೆ ಮಹದೇಶ್ವರನಿಗೆ ಮಧ್ಯರಾತ್ರಿ ಜೈಕಾರ ಹಾಕಿದ್ದಾರೆ. ಇನ್ನು, ಬಿಳಿಗಿರಿರಂಗನನಾಥ ದೇವಾಲಯ ಹಾಗೂ ಗೋಪಾಲಸ್ವಾಮಿ ಬೆಟ್ಟಕ್ಕಂತೂ ಬೈಕ್ ರೈಡರ್ಗಳು, ಕುಟುಂಬ ಹಾಗೂ ಸ್ನೇಹಿತರ ಗುಂಪುಗಳೇ ಸೇರಿದ್ದು ನೂತನ ವರ್ಷವನ್ನು ಪ್ರಕೃತಿ ಮಡಿಲಲ್ಲಿ ಕಳೆಯುತ್ತಾ ಸಂಭ್ರಮಿಸಿದ್ದಾರೆ.