ಹುಬ್ಬಳ್ಳಿ: ಆರ್‌ಸಿಬಿ ವಿಜಯೋತ್ಸವದ ವೇಳೆ ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ನಡೆದ ಕಾಲ್ತುಳಿತ ಪ್ರಕರಣದಲ್ಲಿ ಪೊಲೀಸರ ವೈಫಲ್ಯವೇ ಕಾರಣ ಎಂದು ತನಿಖೆ ನಡೆಸಿದ್ದ ನಿವೃತ್ತ ನ್ಯಾಯಮೂರ್ತಿ ಮೈಕಲ್ ಕುನ್ಹಾ ವರದಿ ಒಪ್ಪಿಕೊಳ್ಳಲು ಸಾಧ್ಯವಿಲ್ಲ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಹೇಳಿದರು.
ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜನರನ್ನು ವಿಜಯೋತ್ಸವಕ್ಕೆ ಆಹ್ವಾನಿಸಿದ್ದು ಯಾರು. ಸಮಾರಂಭಕ್ಕೆ ಅನುಮತಿ ನೀಡಿದ್ದು ಯಾರು. ಪೊಲೀಸ್ ಅಧಿಕಾರಿಗಳು ವಿಜಯೋತ್ಸವ ಬೇಡ ಎಂದು ಹೇಳಿದ್ದರೂ, ಕಾಂಗ್ರೆಸ್ ಮುಖಂಡರು ತಮ್ಮ ಪ್ರತಿಷ್ಠೆಗಾಗಿ, ಒತ್ತಾಯ ಪೂರ್ವಕವಾಗಿ ಅದ್ಧೂರಿ ಸಮಾರಂಭ ಮಾಡಲು ನಿರ್ಧರಿಸಿದರು. ಈಗ ಪೊಲೀಸರ ಮೇಲೆಯೇ ಆರೋಪದ ವರದಿ ಸಿದ್ಧವಾಗಿರುವುದು ಸರಿಯಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ತನಿಖೆಗೆ ಆಯೋಗ ರಚಿಸುವ ಪೂರ್ವ, ಸರ್ಕಾರ ಹೈಕೋರ್ಟ್ ನ್ಯಾಯಮೂರ್ತಿ ಅವರಿಂದ ಅನುಮತಿ ಪಡೆದಿಲ್ಲ. ಹೀಗಾಗಿ ಈ ವರದಿ ಒಪ್ಪಿಕೊಳ್ಳಲು ಸಾಧ್ಯವಿಲ್ಲ ಎಂದು ಕಿಡಿಕಾರಿದರು.