ಪ್ರಯಾಣಿಕರ ಸೋಗಿನಲ್ಲಿ ಚಿನ್ನ ಸಾಗಿಸುತ್ತಿದ್ದ ಇಬ್ಬರನ್ನು ಬಂಧಿಸಿರುವ ಕಸ್ಟಮ್ಸ್ ಅಧಿಕಾರಿಗಳು

ಶುಕ್ರವಾರ, 8 ಅಕ್ಟೋಬರ್ 2021 (20:21 IST)
ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ಪ್ರಯಾಣಿಕರ ಸೋಗಿನಲ್ಲಿ ಚಿನ್ನ ಸಾಗಿಸುತ್ತಿದ್ದ ಇಬ್ಬರನ್ನು ಬಂಧಿಸಿರುವ ಕಸ್ಟಮ್ಸ್ ಅಧಿಕಾರಿಗಳು, ಅವರಿಂದ 420 ಗ್ರಾಂ ಚಿನ್ನಾಭರಣ ವಶಪಡಿಸಿಕೊಂಡಿದ್ದಾರೆ. 
ಆರೋಪಿಗಳು ಚಿನ್ನವನ್ನು ಪ್ಯಾಂಟ್‍ಗಳಲ್ಲಿ, ಒಳ ಉಡುಪುಗಳಲ್ಲಿ  ಮತ್ತು ಅವರ ಚೆಕ್-ಇನ್ ಬ್ಯಾಗ್‍ನಲ್ಲಿ  ಕದ್ದು ತಂದಿದ್ದರು. ಬುಧವಾರ ನಸುಕಿನ ಜಾವ ಕಾರ್ಯಾಚರಣೆ ನಡೆಸಿದ ಅಧಿಕಾರಿಗಳು, ಏರ್ ಅರೇಬಿಯಾ ವಿಮಾನದಲ್ಲಿ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬರುತ್ತಿದ್ದ ಪ್ರಯಾಣಿಕರಿಂದ ಚಿನ್ನದ ಪುಡಿ, ಬಳೆ ಮತ್ತು ಚಿನ್ನದ ಬಿಸ್ಕತ್ತುಗಳು ಸೇರಿ  ನಾನಾ ಮಾದರಿಯ 421.45 ಗ್ರಾಂ ಚಿನ್ನವನ್ನು ವಶಪಡಿಸಿಕೊಂಡಿದ್ದಾರೆ. 
ಶಾರ್ಜಾದಿಂದ ಬೆಂಗಳೂರಿಗೆ ಬರುತ್ತಿದ್ದ 47 ವರ್ಷದ ಆಂಧ್ರಪ್ರದೇಶದ ಕಡಪ ಮೂಲದ ಪ್ರಯಾಣಿಕ 116.48 ಗ್ರಾಂ ತೂಕದ ಚಿನ್ನದ ಬಿಸ್ಕತ್ತುಗಳು ಮತ್ತು 126.88 ಗ್ರಾಂ ತೂಕದ 3 ಬಳೆಗಳನ್ನು ಪ್ಲಾಸ್ಟಿಕ್ ಚೆಕ್ ಇನ್ ಬ್ಯಾಗ್ ಒಳಗೆ ಮತ್ತು ಪ್ಯಾಂಟ್ ನ ಜೇಬಿನಲ್ಲಿ ಅಡಗಿಸಿಟ್ಟಿಕೊಂಡಿದ್ದರು. ಇವರನ್ನು ಅನುಮಾನಸ್ಪದವಾಗಿ ಹಿಡಿದು ಅವರ ಬ್ಯಾಗೇಜ್ ಅನ್ನು ಸ್ಕ್ಯಾನ್ ಮಾಡಿದಾಗ ಚಿನ್ನಾಭರಣ ಪತ್ತೆಯಾಗಿದೆ ಎಂದು ಕಸ್ಟಮ್ಸ್ ಅಧಿಕಾರಿಗಳು ತಿಳಿಸಿದರು. 
ಮತ್ತೊಂದು ಪ್ರಕರಣದಲ್ಲಿ ತಮಿಳುನಾಡಿನ ತಿರುಚಿರಾಪಳ್ಳಿಯ 52 ವರ್ಷದ ಪ್ರಯಾಣಿಕ ತನ್ನ ಚೆಕ್-ಇನ್ ಬ್ಯಾಗ್‍ನಲ್ಲಿ  ತುಂಬಿದ್ದ ಒಳ ಉಡುಪುಗಳ ಹಾಕಿರುವ ಬಾಕ್ಸ್‍ನಲ್ಲಿ  ಪೇಪರ್‍ಫಾಯಿಲ್‍ಗಳ ನಡುವೆ ಬಂಗಾರದ ಪುಡಿಯನ್ನು ಸಾಗಿಸುತ್ತಿದ್ದ. ಈತನ ಬ್ಯಾಗ್ ಅನ್ನು ಪರೀಕ್ಷೆಗೊಳಪಡಿಸಿದಾಗ 178.09 ಗ್ರಾಂ ಚಿನ್ನ  ಹಾಗೂ ಚಿನ್ನದ ಪುಡಿ ಪತ್ತೆಯಾಗಿದೆ ಎಂದು ತಿಳಿಸಿದರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ