ದಲಿತ ಮಹಿಳೆಗೆ ಕಿರುಕುಳ ಪ್ರಕರಣ: ಸಿದ್ದರಾಮಯ್ಯ ಸರ್ಕಾರದ ವಿರುದ್ಧ ಕುಮಾರಸ್ವಾಮಿ ವಾಗ್ದಾಳಿ

ಮಂಗಳವಾರ, 24 ಮೇ 2016 (14:06 IST)
ಮುಖ್ಯಮಂತ್ರಿ ಸಿದ್ದರಾಮಯ್ಯನವರ ಜನತಾದರ್ಶನದಲ್ಲಿ ದಲಿತ ಮಹಿಳೆಗೆ ಕಿರುಕುಳ ಪ್ರಕರಣಕ್ಕೆ ಸಂಬಂಧಿಸಿದಂತೆ ಜೆಡಿಎಸ್‌ ರಾಜ್ಯಾಧ್ಯಕ್ಷ ಕುಮಾರಸ್ವಾಮಿ ದಲಿತ ಮಹಿಳೆಯೊಂದಿಗೆ ಸುದ್ದಿಗೋಷ್ಠಿ ನಡೆಸಿದರು.
 
ವಿಧಾನಸೌಧದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕುಮಾರಸ್ವಾಮಿ, ಪೊಲೀಸ್ ಆಯುಕ್ತ ಮೇಘರಿಕ್ ಅವರು ತಪ್ಪು ಮಾಹಿತಿ ನೀಡುತ್ತಿದ್ದಾರೆ. ಯಾವ ಪುರುಷಾರ್ಥಕ್ಕೆ ಜನತಾದರ್ಶನ ನಡೆಸುತ್ತಿದ್ದೀರಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯನವರನ್ನು ಪ್ರಶ್ನಿಸಿದ್ದಾರೆ.
 
ದಲಿತ ಮತ್ತು ಅಹಿಂದ ಪರವಾಗಿ ನಮ್ಮ ಸರಕಾರ ಕೆಲಸ ಮಾಡುತ್ತದೆ ಎಂದು ಹೇಳುವ ಸಿದ್ದರಾಮಯ್ಯ, ಈ ಮಹಿಳೆಯ ಸಮಸ್ಯೆಗೆ ಮೂರು ದಿನಗಳಲ್ಲಿ ಪರಿಹಾರ ಒದಗಿಸಬೇಕು. ಇಲ್ಲದಿದ್ದರೆ ನಾನೇ ಖುದ್ದಾಗಿ ಬಂದು ಸಿಎಂ ನಿವಾಸದ ಎದುರು ಪ್ರತಿಭಟನೆ ನಡೆಸುತ್ತೇನೆ.ತಾಕತ್ತಿದ್ರೆ ನನ್ನನ್ನು ಜೈಲಿಗೆ ಹಾಕಲಿ. ಸಿದ್ದರಾಮಯ್ಯನವರೆ ನೊಂದ ಮಹಿಳೆಗೆ ಪರಿಹಾರ ನೀಡಲು ನಿಮ್ಮ ಸರಕಾರದ ಬಳಿ ಹಣವಿಲ್ಲದಿದ್ದರೆ ಹೇಳಿ, ನಾನೇ 5 ಲಕ್ಷ ರೂಪಾಯಿ ಹಣವನ್ನು ಪರಿಹಾರವಾಗಿ ನೀಡುತ್ತೇನೆ ಎಂದು ಜೆಡಿಎಸ್‌ ರಾಜ್ಯಾಧ್ಯಕ್ಷ ಕುಮಾರಸ್ವಾಮಿ ರಾಜ್ಯ ಸರಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ
 
ಸುದ್ದಿಗೋಷ್ಠಿಯಲ್ಲಿ ತನ್ನ ಅಳಲು ತೋಡಿಕೊಂಡ ನೊಂದ ಮಹಿಳೆ, ನಮಗೆ ನ್ಯಾಯ ಬದ್ಧವಾಗಿ ದೊರಕಬೇಕಿದ್ದ ಹಕ್ಕು ಪತ್ರ ಕೇಳಲು ಜನತಾದರ್ಶನಕ್ಕೆ ತೆರಳಿದ್ದೆ. ವ್ಯೆಶ್ಯಾವಾಟಿಕೆ ನಡೆಸಲು ಮುಖ್ಯಮಂತ್ರಿ ಬಾಗಿಲಿಗೆ ತೆರಳಬೇಕಾ ಎಂದು ಮಹಿಳೆ ತನ್ನ ನೋವನ್ನು ಹೇಳಿಕೊಂಡಿದ್ದು, ನಿಂದನೆ ಮಾಡಿದ ಪೊಲೀಸರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾಳೆ.

ವೆಬ್‌ದುನಿಯಾ ಮೊಬೈಲ್ ಆಪ್ (ಡೌನ್‌ಲೋಡ್) ಮಾಡಿಕೊಂಡು ತಾಜಾ ಸುದ್ದಿಗಳನ್ನು ಪಡೆಯಿರಿ.
 
 

ವೆಬ್ದುನಿಯಾವನ್ನು ಓದಿ