ವಸತಿ ನಿಲಯ ಹಾಗೂ ವಸತಿ ಶಾಲೆಗಳಲ್ಲಿ ಈ ಕೆಲಸ ಆಗ್ತಿದೆ ಎಂದು ಡಿಸಿಎಂ ವಿವರ ಬಿಚ್ಚಿಟ್ಟಿದ್ದಾರೆ.
ಕೊರೊನಾ ವೈರಸ್ ನಿಯಂತ್ರಣಕ್ಕಾಗಿ ಸಮಾಜ ಕಲ್ಯಾಣ ಇಲಾಖೆಯು ಅನೇಕ ಕಾರ್ಯಕ್ರಮಗಳನ್ನು ಅನುಷ್ಟಾನಗೊಳಿಸುತ್ತಿದೆ. ಸಮಾಜ ಕಲ್ಯಾಣ ಇಲಾಖೆಯ 44 ವಸತಿ ನಿಲಯ ಹಾಗೂ 54 ಮುರಾರ್ಜಿ ದೇಸಾಯಿ ವಸತಿ ಶಾಲೆ ಸೇರಿದಂತೆ ಒಟ್ಟು 98 ವಸತಿ ಶಾಲೆ ಹಾಗೂ ವಸತಿ ನಿಲಯಗಳಲ್ಲಿ 784 ಜನರನ್ನು ಕ್ವಾರಂಟೈನ್‍ನಲ್ಲಿಡಲಾಗಿದೆ ಎಂದು ಉಪಮುಖ್ಯಮಂತ್ರಿ ಗೋವಿಂದ ಎಂ ಕಾರಜೋಳ ತಿಳಿಸಿದ್ದಾರೆ.
ಕೊರೊನಾ ನಿಯಂತ್ರಣಕ್ಕಾಗಿ ಜಾರಿಯಲ್ಲಿರುವ ಲಾಕ್ ಡೌನ್‍ನಿಂದ ಬಾಧಿತರಾದವರಿಗೆ, ನಿರಾಶ್ರಿತರಿಗೆ, ಅಸಂಘಟಿತ ಕೂಲಿ ಕಾರ್ಮಿಕರಿಗೆ, ಅಲೆಮಾರಿ ಜನಾಂಗದವರಿಗೆ ಹಾಗೂ ಆಶ್ರಯ ಕೋರಿ ಬಂದ ಒಟ್ಟು 5108 ಜನರಿಗೆ ಸಮಾಜ ಇಲಾಖೆಯ ವ್ಯಾಪ್ತಿಯ 92 ವಸತಿ ಶಾಲೆಗಳಲ್ಲಿ ಹಾಗೂ ನಿಲಯಗಳಲ್ಲಿ ಆಶ್ರಯ ಕಲ್ಪಿಸಲಾಗಿದೆ. ರಾಜ್ಯದಲ್ಲಿ ಯಾರೂ ಅನ್ನ, ನೀರು ದೊರಕದೇ ಬಳಲಬಾರದು ಎನ್ನುವುದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಆಶಯವಾಗಿದೆ.
ಅದಕ್ಕೆ ಪೂರಕವಾಗಿ ಸಮಾಜ ಕಲ್ಯಾಣ ಇಲಾಖೆಯು ಶ್ರಮಿಸುತ್ತಿದ್ದು, ವಸತಿ ನಿಲಯಗಳ ಆಶ್ರಯದಲ್ಲಿರುವವರಿಗೆ ಪ್ರತಿನಿತ್ಯ ತಿಂಡಿ, ಊಟೋಪಚಾರ ನೀಡಿ, ಆರೈಕೆ ಮಾಡಲಾಗುತ್ತಿದೆ. ಸೂಕ್ತ ವಸತಿ, ಸ್ನಾನಗೃಹ ಸೌಲಭ್ಯ ಒದಗಿಸಿ, ಸಾಬೂನು ಸೇರಿದಂತೆ ಮೂಲಭೂತಸೌಕರ್ಯಗಳನ್ನು ನೀಡಲಾಗಿದೆ ಎಂದಿದ್ದಾರೆ.