ಯಾಮಸ್ವರೂಪಿಯಂತೆ ತೆರೆದಿರುವ ಡೆಡ್ಲಿ ಗುಂಡಿಗಳು..!

ಬುಧವಾರ, 8 ಸೆಪ್ಟಂಬರ್ 2021 (19:07 IST)
ಬೆಂಗಳೂರು:- ಅದೆಷ್ಟ್ ಎಚ್ಚರಿಕೆಗಳು..ಅದೆಷ್ಟ್ ಡೆಡ್ ಲೈನ್ ಗಳು..ಅಷ್ಟಾದ್ರೂ ಬಿಬಿಎಂಪಿ ಆಡಳಿತ ಸುಧಾರಣೆಯಾಗಿದೆಯಾ..ಖಂಡಿತಾ ಇಲ್ಲ…ಅದರಲ್ಲೂ ಗುಂಡಿಗಳ ವಿಚಾರದಲ್ಲಂತೂ ಅದೆಷ್ಟ್ ಡೆಡ್ ಲೈನ್ ಗಳನ್ನು ನೋಡಿ..ನೋಡಿ ಸಾಕಾಗಿ ಹೋಗಿದೆ. ಆದ್ರೂ ಗುಂಡಿಗಳಿಂದ ಮುಕ್ತಿಸಿಕ್ಕಿಲ್ಲ.. ಬೆಂಗಳೂರಿಗರಿಗೆ..ಇದೆಲ್ಲದರ ನಡುವೆಯೇ ಸರ್ಕಾರ ಚಾಟಿ ಬೀಸಿದ್ದರಿಂದ ಎಚ್ಚೆತ್ತುಕೊಂಡ ಬಿಬಿಎಂಪಿ  ಮತ್ತೊಂದು ಹೊಸ ಡೆಡ್ ಲೈನ್ ಹಾಕ್ಕೊಂಡಿದೆ.ಅದೇ ಸೆಪ್ಟೆಂಬರ್ 20
 
ಯೆಸ್.ಈ ಅವಧಿಯೊಳಗೆ ಬೆಂಗಳೂರು ಸಂಪೂರ್ಣ ಗುಂಡಿಮುಕ್ತವಾಗುತ್ತಂತೆ..ಇದು ನಂಬೊ ಮಾತಾ..ಗೊತ್ತಾಗ್ತಿಲ್ಲ.
ಎಲ್ಲರಿಗೂ ಗೊತ್ತಿರುವಂತೆ  ರಾಜಧಾನಿ ಬೆಂಗಳೂರಿಗೆ ಕಳಂಕ ತಂದೊಡ್ಡಿರುವುದರಲ್ಲಿ ಗುಂಡಿಗಳದ್ದು ಸಿಂಹಪಾಲು. ಗುಂಡಿಗಳನ್ನು ಸಂಪೂರ್ಣ ಮುಚ್ಚಿಸೊಕ್ಕೆ ಬಿಬಿಎಂಪಿ ಮತ್ತೊಂದು ಡೆಡ್ ಲೈನ್ ಹಾಕ್ಕೊಂಡಿದೆ.ಸರ್ಕಾರ ಕೆರಳಿ ಕೆಂಡವಾಗಿರುವುದರಿಂದ ಬೆಚ್ಚಿಬಿದ್ದು  ನವೆಂಬರ್ ತಿಂಗಳ 30ರೊಳಗೆ ಇಡೀ ಬೆಂಗಳೂರನ್ನು ಗುಂಡಿಮುಕ್ತಗೊಳಿಸಿ ವಾಹನ ಸವಾರರಿಗೆ ಅನುವು ಮಾಡಿಕೊಡುತ್ತೇನೆಂದು ಆಶ್ವಾಸನೆ ನೀಡಿದೆ. ಆದ್ರೆ  ಡೆಡ್ ಲೈನ್ ನಂಬ್ಕೊಂಡು ಜೀವನ ಮಾಡೋದನ್ನು ಎಂದೋ ಬಿಟ್ಟಿರುವ ಬೆಂಗಳೂರಿಗರಿಗೆ ಆ ಭರವಸೆಯೂ ಇಲ್ಲವಾಗಿದೆ.
 
ಎಸ್,ಜಾಗತಿಕ ಮಟ್ಟದಲ್ಲಿ ಬೆಂಗಳೂರನ್ನು ಗುಂಡಿನಗರಿ ಎಂದೂ ಅಪಹಾಸ್ಯ ಮಾಡಿಕೊಂಡು ನಗುವುದುಂಟು. ಇದಕ್ಕೆ ನೇರ ಹಾಗೂ ನೈತಿಕ  ಹೊಣೆ ಬಿಬಿಎಂಪಿ ಎನ್ನೋದ್ರಲ್ಲಿ ಡೌಟೇ ಇಲ್ಲ. ರಸ್ತೆ ನಿರ್ಮಾಣ ಹಾಗೂ ನಿರ್ವಹಣೆಗಾಗಿ ವರ್ಷಕ್ಕೆ ಬಜೆಟ್ ನಲ್ಲಿ ಅದು ಕಾಯ್ದಿರಿಸುವ ಮೊತ್ತವೇ ಅದೆಷ್ಟೋ ಸಾವಿರ ಕೋಟಿ.ಆದರೆ ಅದರ ನಿರ್ವಹಣೆ ವಿಷಯದಲ್ಲಿನ ನಿರ್ಲಕ್ಷ್ಯವೇ  ರಸ್ತೆಗಳಲ್ಲಿ ಗುಂಡಿಗಳೆನ್ನೋದು ಕಾಮನ್ ಆಗೋಗಲು ಕಾರಣವಾಗಿದೆ.ಒಂದ್ ಹೆಜ್ಜೆ ಮುಂದ್ಹೋಗಿ ಇದೇ ಭ್ರಷ್ಟಾಚಾರಕ್ಕೂ ಹಾದಿ ಮಾಡಿಕೊಟ್ಟಿದೆ ಎನ್ನೋದು ಕೂಡ ಅಷ್ಟೇ ಸತ್ಯ.
 ಬಹುಷಃ ಇತ್ತೀಚಿನ ವರ್ಷಗಳಲ್ಲಿ ಸುರಿದಿರಲಾರದಷ್ಟು ಮಳೆ ಈ ಬಾರಿ ಬೆಂಗಳೂರಿನಲ್ಲಾಗಿದೆ. ಈ ಕಾರಣಕ್ಕೆ ರಸ್ತೆಗಳಲ್ಲಿ ಗುಂಡಿಗಳಿವೆಯೋ..ಗುಂಡಿಗಳೇ ರಸ್ತೆಗಳಾಗಿವೆಯೋ ಎನ್ನುವ ಶಂಕೆ ಮೂಡಿದೆ.ಬೆಂಗಳೂರಿನ ರಸ್ತೆಗಳ ಅವ್ಯವಸ್ಥೆ ಕಂಡು ಸಿಎಂ ಬೊಮ್ಮಾಯಿ ಕೆಂಡಾಮಂಡಲವಾಗಿದ್ರು.ಆಡಳಿತಾಧಿಕಾರಿ-ಕಮಿಷನರ್ ಅವರನ್ನು ತರಾಟೆಗೆ ತೆಗೆದುಕೊಂಡಿದ್ರು. ಇದರಿಂದ ಎಚ್ಚೆತ್ತುಕೊಂಡು ಇತ್ತೀಚೆಗೆ ನಡೆಸಿದ ಸಭೆಯಲ್ಲಿ ಕೊರೊನಾ ಡ್ಯೂಟಿಯಲ್ಲೇ ಆಡಳಿತ ವರ್ಗ ಬ್ಯುಸಿಯಾಗಿರೋದ್ರಿಂದ ರಸ್ತೆಗಳನ್ನು ಗುಂಡಿಮುಕ್ತಗೊಳಿಸುವುದು ಸ್ವಲ್ಪ ಕಷ್ಟವಾಗುತ್ತಿದೆ ಎಂಬ ಅಸಹಾಯಕತೆಯನ್ನು ಅಧಿಕಾರಿಗಳು ವ್ಯಕ್ತಪಡಿಸಿದ್ದರು.  ಬಿಬಿಎಂಪಿ ಆಯುಕ್ತ  ಗೌರವ್ ಗುಪ್ತ್ ಮತ್ತು ಆಡಳಿತಾಧಿಕಾರಿ ರಾಕೇಶ್ ಸಿಂಗ್  ಕೂಡ ವಿಧಿಯಿಲ್ಲದೆ ಇದಕ್ಕೆ ತಲೆ ಅಲ್ಲಾಡಿಸಬೇಕಾಗಿಬಂದಿತ್ತು.ಅದನ್ನು ಕೇಳದೆ ಅವರಿಗೆ ಬೇರೆ ಮಾರ್ಗವೂ ಇರಲಿಲ್ಲ ಬಿಡಿ.
ಕಾರಣ ಏನ್ರಿ ಎಂದು ಜೋಡೆತ್ತುಗಳು ಸಿಡಿಮಿಡಿಗೊಂಡಾಗ  ಸಭೆಯಲ್ಲಿದ್ದ ಅಧಿಕಾರಿಗಳು ಯಾವ್ ಮಟ್ಟದ ಅಸಹಾಯಕತೆ ವ್ಯಕ್ತಪಡಿಸಿದ್ದರೆಂದ್ರೆ ಲಾಕ್ ಡೌನ್ ಆದಾಗ ಬೆಂಗಳೂರನ್ನು ಬಿಟ್ಟು ಹೋದ ಉತ್ತರ ಭಾರತ ಮೂಲದ ಶ್ರಮಿಕರು ಇನ್ನೂ ವಾಪಸ್ಸಾಗಿಲ್ಲ ಎಂದಿದ್ರು. ಆದ್ರೆ ಇದೀಗ ಗೌರವ್ ಗುಪ್ತಾಗೆ ಬುದ್ದಿ ಬಂದಂತೆಯಾಗಿದೆ. ಹೀಗಾಗಿ ಇನ್ನೂ ಮೂರುತಿಂಗಳ ಒಳಗಾಗಿ ರಸ್ತೆಗುಂಡಿ ಮುಚ್ಚುವುದಾಗಿ ಗೌರವ್ ಗುಪ್ತಾ ಹೇಳಿದ್ದಾರೆ. ಆದರೆ ವಿಷಯ ಅದಲ್ಲ, ಮುಖ್ಯಮಂತ್ರಿ ಬೊಮ್ಮಾಯಿ ಬೆಂಗಳೂರಿನ ಮಾನವನ್ನು ಹರಾಜು ಹಾಕುತ್ತಿರುವ ಗುಂಡಿಗಳ ಬಗ್ಗೆ ಗಂಭೀರವಾಗಿದ್ದಾರೆ ಅಷ್ಟೇ ಅಲ್ಲ,ನವೆಂಬರ್ 30ರೊಳಗೆ ಬೆಂಗಳೂರನ್ನು ಗುಂಡಿಮುಕ್ತಗೊಳಿಸಲೇಬೇಕು ಎಂದು ಕಟ್ಟಪ್ಪಣೆ ಮಾಡಿರುವುದನ್ನು ಸರ್ಕಾರದ ಮುಖ್ಯ ಕಾರ್ಯದರ್ಶಿ  ಅವರ ಗಮನಕ್ಕೆ ತಂದಿದ್ದಾರೆ.
ಅಂದ್ಹಾಗೆ ಸಿಎಂ ಕೊಟ್ಟಿರುವ ನಿರ್ದೇಶನದಂತೆ ಬೆಂಗಳೂರಿನ  ಎಲ್ಲಾ ಪ್ರಮುಖ ರಸ್ತೆಗಳನ್ನು ನವೆಂಬರ್ 15 ರೊಳಗೆ ಗುಂಡಿ ರಹಿತವಾಗಿಸಬೇಕು.ಹಾಗೆಯೇ  ಎಲ್ಲಾ ವಾರ್ಡ್ ರಸ್ತೆಗಳನ್ನು ನವೆಂಬರ್ 30 ರೊಳಗೆ ಗುಂಡಿ ರಹಿತವಾಗಿಸಲೇಬೇಕಾಗಿದೆ.ಇದನ್ನು ಮೊದಲ ಆದ್ಯತೆಯನ್ನಾಗಿಸಿಕೊಂಡು ಕೆಲಸವನ್ನು ಮಾಡಬೇಕಿದೆ.
 ಸಿಎಂ ಕೊಟ್ಟಿರುವ ಖಡಕ್  ಎಚ್ಚರಿಕೆಯಿಂದ ಎಚ್ಚೆತ್ತುಕೊಂಡಿರುವ ಬಿಬಿಎಂಪಿ ಇದಕ್ಕಾಗಿ ತಂಡಗಳನ್ನು ರಚಿಸಿದೆ.  ಪೂರ್ವ, ಪಶ್ಚಿಮ ಮತ್ತು ದಕ್ಷಿಣ ವಲಯ ವ್ಯಾಪ್ತಿಯಲ್ಲಿ ತಲಾ 2 ತಂಡ, ಮಹಾದೇವಪುರ, ಬೊಮ್ಮನಹಳ್ಳಿ, ಆರ್.ಆರ್.ನಗರ, ಯಲಹಂಕ ಮತ್ತು ದಾಸರಹಳ್ಳಿ ವಲಯಗಳು: ತಲಾ 3 ತಂಡ ರಚಿಸಲಾಗಿದೆ.ಹಾಟ್ ಮಿಕ್ಸ್ ಗುತ್ತಿಗೆದಾರನು ಪ್ರತಿದಿನ 31 ಟ್ರಕ್ ಲೋಡ್ ಬಿಸಿ ಮಿಶ್ರಣವನ್ನು ಪೂರೈಸಬೇಕಿದೆ.ಇದರಲ್ಲಿ ಕೊಂಚ ವ್ಯತ್ಯಾಸವೂ ಬಾರದಂತೆ ಎಚ್ಚರ ವಹಿಸಬೇಕೆಂದು ಸೂಚಿಸಲಾಗಿದೆ.ಇನ್ನೂ ರಸ್ತೆ ಗುಂಡಿ ಬಗ್ಗೆ ಸಾರ್ವಜನಿಕರು ಅಸಮಾಧಾನದ ಮಾತನ್ನು ಹೇಳಿದರು. ಆದರೆ ಪ್ರಶ್ನೆ ಇರೋದು ಈಗಾಗ್ಲೇ ಗುಂಡಿ ಮುಚ್ಚೊಕ್ಕೆ ನೀಡಲಾದ ಡೆಡ್ ಲೈನ್ ಗಳನ್ನು ಬಿಬಿಎಂಪಿ ಹೇಗೆ ಫಾಲೋ ಮಾಡಿದೆ.ಅದರೊಳಗೆ ಯಾವ್ ರೇಂಜ್ನಲ್ಲಿ ಕೆಲಸ ಮಾಡಿ ಮುಗಿಸಿದೆ ಎನ್ನೋದನ್ನು ಬೆಂಗಳೂರಿಗರು ನೋಡಿದ್ದಾರೆ.ಇಂಥಾ ಸನ್ನಿವೇಶದಲ್ಲಿ ನವೆಂಬರ್ 30ರ ಮತ್ತೊಂದು ಹೊಸ ಡೆಡ್ ಲೈನ್ ಬೆಂಗಳೂರಿಗರಿಗೆ ಆಶ್ಚರ್ಯವೇನೂ ತರಿಸಿಲ್ಲ..ಯಾಕಂದ್ರೆ ಬಿಬಿಎಂಪಿ ಹಣೇಬರಹ ಏನನ್ನೋದು ಅದಾಗ್ಲೇ ಅವರಿಗೆ ತಿಳಿದಿದ್ದಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ