ಸಾವಿನ ಸಂಖ್ಯೆ 8 ಸಾವಿರಕ್ಕೆ ಏರಿಕೆ
ಟರ್ಕಿ, ಸಿರಿಯಾ ದೇಶಗಳಲ್ಲಿ ಸೋಮವಾರ ಸಂಭವಿಸಿದ ನಾಲ್ಕು ಭೂಕಂಪಗಳಿಂದ ಸಾವಿನ ಸಂಖ್ಯೆ ಕ್ಷಣಕ್ಷಣವೂ ಹೆಚ್ಚಾಗುತ್ತಿದೆ. ಬುಧವಾರ ಬೆಳಗಿನ ವರದಿಗಳ ಪ್ರಕಾರ ಸಾವಿನ ಸಂಖ್ಯೆ 7,800 ದಾಟಿದೆ. ಇದು ಅಧಿಕೃತವಾಗಿ ದೃಢಪಟ್ಟ ಸಾವುಗಳು. ಟರ್ಕಿಯೊಂದರಲ್ಲೇ 6 ಸಾವಿರದಷ್ಟು ಮಂದಿ ಸಾವನಪ್ಪಿದ್ದಾರೆ. ಸಿರಿಯಾದಲ್ಲಿ ಸಾವಿನ ಸಂಖ್ಯೆ 2 ಸಾವಿರ ಸಮೀಪವಿದೆ. ಟರ್ಕಿಯಲ್ಲಿ ಗಾಯಾಳುಗಳ ಸಂಖ್ಯೆ 32 ಸಾವಿರಕ್ಕೂ ಹೆಚ್ಚು ಇದ್ದಾರೆ. ಇವರಲ್ಲಿ ಬಹಳಷ್ಟು ಮಂದಿಯ ಸ್ಥಿತಿ ಗಂಭೀರವಾಗಿದೆ. ಅಲ್ಲದೇ, ಭೂಕಂಪದ ಬಳಿಕ ಕಣ್ಮರೆಯಾಗಿರುವವರ ಸಂಖ್ಯೆ ಇನ್ನೂ ಅಧಿಕೃತವಾಗಿ ಲೆಕ್ಕಕ್ಕೆ ಸಿಕ್ಕಿಲ್ಲ. ವಿಶ್ವ ಆರೋಗ್ಯ ಸಂಸ್ಥೆ (WHO) ನಿನ್ನೆ ಮಾಡಿರುವ ಅಂದಾಜು ಪ್ರಕಾರ ಟರ್ಕಿ ಭೂಕಂಪದಲ್ಲಿ ಸಾವಿನ ಸಂಖ್ಯೆ ಕನಿಷ್ಠ 20 ಸಾವಿರವಾದರೂ ಆಗಬಹುದಂತೆ. ಇದೇ ವೇಳೆ ಇನ್ನೂ ಬೆಚ್ಚಿಬೀಳಿಸುವ ಸಂಗತಿಯನ್ನು ಭೂಕಂಪ ತಜ್ಞ ಓವಗುನ್ ಅಹ್ಮತ್ ಎರ್ಕಾನ್ ತಿಳಿಸಿದ್ದಾರೆ. ಅವರ ಪ್ರಕಾರ ಕಟ್ಟಡಗಳ ಅವಶೇಷಗಳಡಿ ಸುಮಾರು 1.8 ಲಕ್ಷ ಜನರು ಸಿಲುಕಿರಬಹುದು. ಅವರೆಲ್ಲರೂ ಬಹುತೇಕ ಸಾವನ್ನಪ್ಪಿರಬಹುದು ಎಂದು ಅವರು ಎಕನಾಮಿಸ್ಟ್ ಪತ್ರಿಕೆಗೆ ನೀಡಿದ ಸಂದರ್ಶನದಲ್ಲಿ ಅಭಿಪ್ರಾಯಪಟ್ಟಿದ್ದಾರೆ. ಟರ್ಕಿ ದೇಶದಲ್ಲಿ ಈಗ ಮಹಾ ಚಳಿಯ ವಾತಾವರಣ. ಉಷ್ಣಾಂಶ ಶೂನ್ಯಕ್ಕೆ ಬಂದು ನಿಂತಿದೆ. ಸಿರಿಯಾದಲ್ಲಿ ಮಳೆಯ ಕಾಟ ಇದೆ. ಹೀಗಾಗಿ ಈ ಎರಡು ದೇಶಗಳಲ್ಲಿ ರಕ್ಷಣಾ ಕಾರ್ಯಗಳಿಗೆ ತೊಡಕುಂಟಾಗಿದೆ.