ಸರ್ಕಾರದ ಯೋಜನೆಗಳನ್ನು ಜನರಿಗೆ ತಲುಪಿಸಿ: ಬಸವರಾಜ ಬೊಮ್ಮಾಯಿ
ಶುಕ್ರವಾರ, 3 ಜೂನ್ 2022 (20:41 IST)
ಸರ್ಕಾರದ ಯೋಜನೆಗಳನ್ನು ಅರ್ಹ ಬಡವರಿಗೆ, ದೀನ ದಲಿತರಿಗೆ ಮತ್ತು ಮಹಿಳೆಯರಿಗೆ ಪರಿಣಾಮಕಾರಿಯಾಗಿ ತಲುಪಿಸುವಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕೆ ಎ ಎಸ್ ಅಧಿಕಾರಿಗಳಿಗೆ ಸಲಹೆ ನೀಡಿದರು.
ಅವರು ಇಂದು ತಮ್ಮನ್ನು ಭೇಟಿ ಮಾಡಿದ ಕೆ ಎ ಎಸ್ ಅಧಿಕಾರಿಗಳ ಸಂಘದ ನೂತನ ಪದಾಧಿಕಾರಿಗಳನ್ನುದ್ದೇಶಿಸಿ ಮಾತನಾಡಿದರು.
ಕೆಎಎಸ್ ಅಧಿಕಾರಿಗಳು ರಾಜ್ಯದ ಅಭಿವೃದ್ಧಿಯ ಬಗ್ಗೆ ಹೆಚ್ಚಿನ ಅರಿವು ಹೊಂದಿದ್ದು, ಕಾಳಜಿಯನ್ನೂ ವಹಿಸುತ್ತಾರೆ. ಸರ್ಕಾರದ ಯೋಜನೆಗಳನ್ನು ಜನರಿಗೆ ತಲುಪಿಸುತ್ತಾರೆ. ನಿಮ್ಮ ಈ ಒಳ್ಳೆಯ ಕೆಲಸವನ್ನು ಮುಂದುವರೆಸಿ ಎಂದು ತಿಳಿಸಿದರು.
ಸರ್ಕಾರದ ಕಾರ್ಯಕ್ರಮಗಳ ಪರಿಣಾಮಕಾರಿ ಅನುಷ್ಠಾನಕ್ಕಾಗಿ ಅತ್ಯುತ್ತಮವಾಗಿ ಕೆಲಸ ಮಾಡಿ. ಸರ್ಕಾರಕ್ಕೆ ಒಳ್ಳೆ ಹೆಸರು ಬರುವ ರೀತಿಯಲ್ಲಿ ಕಾರ್ಯ ನಿರ್ವಹಿಸುವಂತೆ ಸಲಹೆ ನೀಡಿದರು.
ಕೆ.ಎ.ಎಸ್. ಅಧಿಕಾರಿಗಳ ಸಂಘದ ನೂತನ ಅಧ್ಯಕ್ಷ ರವಿ ತಿರ್ಲಾಪೂರ ಮತ್ತು ಇತರ ಪದಾಧಿಕಾರಿಗಳು ಉಪಸ್ಥಿತರಿದ್ದರು.