55 ದಿನಗಳ ನಂತರ ಪತ್ತೆಯಾಯ್ತು ಬೋಟ್ ಅವಶೇಷ!
ರಾಜ್ಯದ ಬೋಟ್ ವೊಂದರ ಅವಶೇಷ 55 ದಿನಗಳ ನಂತರ ನೆರೆಯ ರಾಜ್ಯದ ಕಡಲ ತೀರದಲ್ಲಿ ಪತ್ತೆಯಾಗಿದೆ.
ಕಡಲ ತೀರದಲ್ಲಿ ಮುಳುಗಿದ್ದ ಬೋಟಿನ ಭಾಗ ಪತ್ತೆಯಾಗಿದೆ. ಮಹಾರಾಷ್ಟ್ರದ ರತ್ನಗಿರಿ ಬಳಿ ಬೋಟಿನ ಅವಶೇಷ ಕಾಣಿಸಿಕೊಂಡಿದ್ದು, ಇದು ನಾಪತ್ತೆಯಾದ ಮಲ್ಪೆ ಮೂಲದ ಬೋಟಿನ ಅವಶೇಷ ಎನ್ನುವ ಶಂಕೆ ವ್ಯಕ್ತವಾಗಿದೆ.
ಅಂಕೋಲಾ ತಾಲೂಕಿನ ಬೇಲೆಕೇರಿ ಮೂಲದ ಮೀನುಗಾರನ ಕಣ್ಣಿಗೆ ಬೋಟಿನ ಅವಶೇಷ ಕಂಡುಬಂದಿದೆ.
ರತ್ನಗಿರಿ ಬಳಿ ಮೀನುಗಾರಿಕೆಗೆ ತೆರಳಿದ್ದಾಗ ತೇಲುತ್ತಿದ್ದ ಬೋಟಿನ ಭಾಗ ಗಮನಿಸಿರುವ ಮೀನುಗಾರ ಈ ಬಗ್ಗೆ ಕರಾವಳಿ ಕಾವಲು ಪಡೆ ಪೊಲೀಸರಿಗೆ ಮಾಹಿತಿ ನೀಡಿದ್ದಾನೆ. ಮೀನುಗಾರನಿಂದ ಸಂಪೂರ್ಣ ಮಾಹಿತಿಯನ್ನು ರಾಜ್ಯದ ಕರಾವಳಿ ಕಾವಲು ಪಡೆ ಪೊಲೀಸರು ಪಡೆದುಕೊಂಡಿದ್ದಾರೆ. ಡಿಸೆಂಬರ್ ನಲ್ಲಿ ಮಲ್ಪೆಯಿಂದ ರತ್ನಗಿರಿಗೆ ಮೀನುಗಾರಿಕೆಗೆ ತೆರಳಿದ್ದ ಸುವರ್ಣ ತ್ರಿಭುಜ ಎನ್ನುವ ಬೋಟ್ ನಾಪತ್ತೆಯಾಗಿತ್ತು. ಬೋಟಿನಲ್ಲಿದ್ದ ರಾಜ್ಯದ 7 ಮೀನುಗಾರರು ನಾಪತ್ತೆಯಾಗಿದ್ದರು.
ಮೀನುಗಾರರ ನಾಪತ್ತೆ ಪ್ರಕರಣ ಇನ್ನೂ ನಿಗೂಢವಾಗಿದೆ.