ಬೆಂಗಳೂರು: ಧರ್ಮಸ್ಥಳದಲ್ಲಿ ನಡೆದಿದೆ ಎನ್ನಲಾದ ಅಸಹಜ ಸಾವುಗಳ ಆರೋಪ ಸಂಬಂಧ ಗಂಭೀರ ಸ್ವರೂಪದ ಅಪರಾಧ ಪ್ರಕರಣಗಳು ನಡೆದಿರಬಹುದಾಗಿದ್ದು, ಈ ಎಲ್ಲಾ ಸಾಧ್ಯತೆಗಳನ್ನು ಪರಿಗಣಿಸಿ ಪ್ರಕರಣದ ಸಮಗ್ರ ಮತ್ತು ನಿಷ್ಪಕ್ಷಪಾತ ತನಿಖೆ ನಡೆಸುವಂತೆ ರಾಜ್ಯ ಮಹಿಳಾ ಆಯೋಗವು ರಾಜ್ಯ ಸರ್ಕಾರಕ್ಕೆ ಕೋರಿದ್ದು, ಅವರ ಕೋರಿಕೆಯ ಮೇರೆಗೆ ನಾಲ್ವರು ಐಪಿಎಸ್ ಅಧಿಕಾರಿಗಳನ್ನೊಳಗೊಂಡ ವಿಶೇಷ ತನಿಖಾ ತಂಡವನ್ನು ರಚಿಸಿ ಆದೇಶಿಸಲಾಗಿದೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.
ಧರ್ಮಸ್ಥಳ ಅಸಹಜ ಸಾವುಗಳ ಆರೋಪ ಸಂಬಂಧ ಎಸ್‌ಐಟಿ ವಿಚಾರಣೆಗೆ ನೀಡಿದ ಸಂಬಂಧ ಸಾಮಾಜಿಕ ಜಾಲತಾಣದಲ್ಲಿ ಸಿಎಂ ಸಿದ್ದರಾಮಯ್ಯ ಅವರು ಬರೆದುಕೊಂಡಿದ್ದಾರೆ.
ಧರ್ಮಸ್ಥಳ ಭಾಗದಲ್ಲಿ ನೂರಾರು ಶವಗಳನ್ನು ಹೂತಿರುವುದಾಗಿ ವ್ಯಕ್ತಿಯೊಬ್ಬರು ನ್ಯಾಯಾಲಯದಲ್ಲಿ ಹೇಳಿಕೆಯನ್ನು ದಾಖಲಿಸಿದ್ದಾರೆ, ಸ್ಥಳೀಯ ಹಾಗೂ ರಾಷ್ಟ್ರೀಯ ಮಾಧ್ಯಮಗಳು ಮನುಷ್ಯನ ತಲೆಬರುಡೆ ದೊರಕಿದ ಸ್ಥಳ ಹಾಗೂ ನಾಪತ್ತೆಯಾದ ವೈದ್ಯಕೀಯ ವಿದ್ಯಾರ್ಥಿನಿಯ ಕುಟುಂಬದವರ ಹೇಳಿಕೆಯನ್ನು ಪ್ರಸಾರ ಮಾಡಿವೆ. ಈ ಪ್ರದೇಶದಲ್ಲಿ ಅಸಹಜ ಸಾವುಗಳು, ಕೊಲೆ, ಅತ್ಯಾಚಾರ ಹೀಗೆ ಗಂಭೀರ ಸ್ವರೂಪದ ಅಪರಾಧ ಪ್ರಕರಣಗಳು ನಡೆದಿರಬಹುದಾಗಿದ್ದು, ಈ ಎಲ್ಲಾ ಸಾಧ್ಯತೆಗಳನ್ನು ಪರಿಗಣಿಸಿ ಪ್ರಕರಣದ ಸಮಗ್ರ ಮತ್ತು ನಿಷ್ಪಕ್ಷಪಾತ ತನಿಖೆ ನಡೆಸುವಂತೆ ರಾಜ್ಯ ಮಹಿಳಾ ಆಯೋಗವು ರಾಜ್ಯ ಸರ್ಕಾರಕ್ಕೆ ಕೋರಿದ್ದು, ಅವರ ಕೋರಿಕೆಯ ಮೇರೆಗೆ ನಾಲ್ವರು ಐಪಿಎಸ್ ಅಧಿಕಾರಿಗಳನ್ನೊಳಗೊಂಡ ವಿಶೇಷ ತನಿಖಾ ತಂಡವನ್ನು ರಚಿಸಿ ಆದೇಶಿಸಲಾಗಿದೆ.
ವಿಶೇಷ ತನಿಖಾ ತಂಡವು ಧರ್ಮಸ್ಥಳ ಠಾಣೆಯಲ್ಲಿ ದಾಖಲಾಗಿರುವ ದೂರು ಸೇರಿದಂತೆ ಇದಕ್ಕೆ ಸಂಬಂಧಪಟ್ಟಂತೆ ರಾಜ್ಯದ ಇತರೆ ಪೊಲೀಸ್ ಠಾಣೆಗಳಲ್ಲಿ ದಾಖಲಾಗಿರುವ ಹಾಗೂ ದಾಖಲಾಗುವ ಎಲ್ಲಾ ಕ್ರಿಮಿನಲ್ ಪ್ರಕರಣಗಳನ್ನು ಸಮಗ್ರ ತನಿಖೆ ನಡೆಸಿ, ವರದಿ ನೀಡಲಿದೆ.