ಬೆಂಗಳೂರು: ಡಿಕೆ ಶಿವಕುಮಾರ್ ಬಿಜೆಪಿ ಸೇರ್ಪಡೆ ವದಂತಿಗಳು ಈಗ ರಾಜ್ಯ ರಾಜಕಾರಣದಲ್ಲಿ ಸಂಚಲನ ಮೂಡಿಸಿದೆ. ಆದರೆ ಇದೆಲ್ಲಾ ಹೈಕಮಾಂಡ್ ಗೆ ನಡುಕ ಹುಟ್ಟಿಸುವ ತಂತ್ರವಷ್ಟೇ ಎಂದು ನೆಟ್ಟಿಗರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಡಿಕೆ ಶಿವಕುಮಾರ್ ಇತ್ತೀಚೆಗೆ ಶಿವರಾತ್ರಿ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದು ಮತ್ತು ಕುಂಭಮೇಳ ಆಯೋಜನೆ ಬಗ್ಗೆ ಹೊಗಳಿ ಮಾತನಾಡಿದ್ದು ಅವರು ಬಿಜೆಪಿಯತ್ತ ವಾಲುತ್ತಿದ್ದಾರೆ ಎಂದು ಸುದ್ದಿಯಾಗಿದೆ. ಆದರೆ ಇದನ್ನು ಅವರು ತಳ್ಳಿ ಹಾಕಿದ್ದಾರೆ.
ಹಾಗಿದ್ದರೂ ಇದರ ಬೆನ್ನಲ್ಲೇ ರಾಜ್ಯದಲ್ಲಿ ಕ್ಷಿಪ್ರ ಕ್ರಾಂತಿಯಾಗುತ್ತದೆ ನೋಡುತ್ತಿರಿ ಎಂದು ಬಿಜೆಪಿ ನಾಯಕ ಬಾಂಬ್ ಸಿಡಿಸಿದ್ದಾರೆ. ಹೀಗಾಗಿ ಮಹಾರಾಷ್ಟ್ರದಂತೆ ರಾಜ್ಯದಲ್ಲೂ ಡಿಕೆ ಶಿವಕುಮಾರ್ ಕಾಂಗ್ರೆಸ್ ನಿಂದ ಹೊರಬಂದು ಬಿಜೆಪಿ ಜೊತೆ ಸರ್ಕಾರ ರಚಿಸಬಹುದು ಎಂದೆಲ್ಲಾ ಊಹಾಪೋಹಗಳು ಹಬ್ಬುತ್ತಿವೆ.
ಆದರೆ ಇದರ ನಡುವೆ ಬಿಜೆಪಿ ಬೆಂಬಲಿಗರು ಇಷ್ಟಕ್ಕೇ ಡಿಕೆಶಿ ಬಿಜೆಪಿ ಸೇರುತ್ತಾರೆ ಎಂಬ ಚರ್ಚೆ ಬೇಡ. ಇದೆಲ್ಲಾ ಕಾಂಗ್ರೆಸ್ ಹೈಕಮಾಂಡ್ ಗೆ ಎಚ್ಚರಿಕೆ ನೀಡಲು ಡಿಕೆಶಿ ಮಾಡುತ್ತಿರುವ ತಂತ್ರ ಎಂದಿದ್ದಾರೆ. ಹೀಗಾಗಿ ಡಿಕೆಶಿ ಈ ವದಂತಿಗಳನ್ನೇ ತಮ್ಮ ರಾಜಕೀಯ ಲಾಭಕ್ಕೆ ಬಳಸಿಕೊಳ್ಳುತ್ತಿದ್ದಾರೆ ಎಂದು ಚರ್ಚೆಯಾಗುತ್ತಿದೆ.