ಬೆಂಗಳೂರು: ಪ್ರಜ್ವಲ್ ರೇವಣ್ಣ ಪೆನ್ ಡ್ರೈವ್ ಪ್ರಕರಣದಲ್ಲಿ ನಾವು ಜೆಡಿಎಸ್ ಪಕ್ಷದವರನ್ನು ಪ್ರಶ್ನೆ ಮಾಡುವುದಿಲ್ಲ. ಆದರೆ ಈ ವಿಚಾರದಲ್ಲಿ ಬಿಜೆಪಿ ಹಾಗೂ ಎನ್‌ಡಿಎ ನಿಲುವು ಏನು ಎಂದು ಡಿಸಿಎಂ ಡಿ ಕೆ ಶಿವಕುಮಾರ್ ಪ್ರಶ್ನಿಸಿದರು.
ಅವರು ಬೆಳಗಾವಿಯಲ್ಲಿ ಮತ್ತು ಕೂಡ್ಲಗಿಯಲ್ಲಿ ಮಾಧ್ಯಮ ಜತೆ ಮಾತನಾಡಿದ ಅವರು, ಜೆಡಿಎಸ್ ಪಕ್ಷದಿಂದ ಪ್ರಜ್ವಲ್ ಅವರನ್ನು ಉಚ್ಛಾಟನೆ ಮಾಡಿರುವುದು ಅವರ ಪಕ್ಷ ಹಾಗೂ ಕುಟುಂಬಕ್ಕೆ ಬಿಟ್ಟಿದ್ದು. ಆದರೆ ಈ ವಿಚಾರದಲ್ಲಿ ಮೈತ್ರಿ ಬಗ್ಗೆ ತಮ್ಮ ನಿಲುವೇನು ಎಂಬುದರ ಬಗ್ಗೆ ಬಿಜೆಪಿ ಹಾಗೂ ಎನ್ ಡಿಎ ನಾಯಕರು ಉತ್ತರಿಸಬೇಕೆಂದರು.
ಪೆನ್ ಡ್ರೈವ್ ವಿಚಾರವಾಗಿ ತನಿಖೆಯಾಗಲಿ ಎಂಬ ಕುಮಾರಸ್ವಾಮಿ ಅವರ ಹೇಳಿಕೆ ಬಗ್ಗೆ ಪ್ರಶ್ನಿಸಿದಾಗ, ಈ ವಿಚಾರ ನಮ್ಮ ನಿಯಂತ್ರಣದಲ್ಲಿಲ್ಲ. ತನಿಖೆ ನಂತರ ಅಧಿಕಾರಿಗಳು ತೀರ್ಮಾನ ಕೈಗೊಳ್ಳುತ್ತಾರೆ. ಆದರೆ ಈ ಪ್ರಕರಣದಲ್ಲಿ ಬಿಜೆಪಿ ನಾಯಕರಾದ ಆರ್.ಅಶೋಕ್, ವಿಜಯೇಂದ್ರ ನುಣುಚಿಕೊಳ್ಳಬಾರದು. ಕುಮಾರಸ್ವಾಮಿ, ಅವರ ಕುಟುಂಬ ಹಾಗೂ ಅವರ ಪಕ್ಷದವರು ಏನಾದರೂ ಮಾಡಿಕೊಳ್ಳಲಿ ಎಂದರು.
ಪ್ರಜ್ವಲ್ ರೇವಣ್ಣ ಪರಾರಿಯಾಗಿರುವ ಬಗ್ಗೆ ನನ್ನನ್ನು ಪ್ರಶ್ನಿಸುವ ಬದಲು ಬಿಜೆಪಿ ನಾಯಕರನ್ನು ಪ್ರಶ್ನಿಸಿ ಎಂದರು.