ಶಾಸಕ ಗೋಪಾಲಯ್ಯ ಬಿಜೆಪಿ ಸೇರ್ಪಡೆಗೆ ಕಾರ್ಯಕರ್ತರು ವಿರೋಧಿಸುತ್ತಿರುವುದರ ಹಿಂದಿನ ಕಾರಣವೇನು ಗೊತ್ತಾ?
ಗುರುವಾರ, 11 ಜುಲೈ 2019 (11:04 IST)
ಬೆಂಗಳೂರು : ಅತೃಪ್ತ ಶಾಸಕ ಗೋಪಾಲಯ್ಯರನ್ನು ಬಿಜೆಪಿಗೆ ಸೇರ್ಪಡೆ ಮಾಡಿಕೊಳ್ಳಲು ಮಹಾಲಕ್ಷ್ಮೀ ಲೇಔಟ್ ಕ್ಷೇತ್ರದ ಬಿಜೆಪಿ ಕಾರ್ಯಕರ್ತರು ತೀವ್ರ ವಿರೋಧ ವ್ಯಕ್ತಪಡಿಸಿದ್ದು, ಇದಕ್ಕೆ ಕಾರಣವೇನೆಂಬುದನ್ನು ಕೂಡ ಕಾರ್ಯಕರ್ತರು ಪತ್ರದಲ್ಲಿ ಉಲ್ಲೇಖಿಸಿದ್ದಾರೆ ಎಂಬುದಾಗಿ ತಿಳಿದುಬಂದಿದೆ.
ಬಿಬಿಎಂಪಿ ಮಾಜಿ ಮೇಯರ್ ಎಸ್. ಹರೀಶ್ ನೇತೃತ್ವದಲ್ಲಿ ಸುಮಾರು 50ಕ್ಕೂ ಹೆಚ್ಚು ಬಿಜೆಪಿ ಕಾರ್ಯಕರ್ತರು ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ ಅವರ ನಿವಾಸಕ್ಕೆ ಆಗಮಿಸಿ ಭೇಟಿ ಮಾಡಿ ಬಿಜೆಪಿಗೆ ಗೋಪಾಲಯ್ಯ ಸೇರ್ಪಡೆಗೆ ನಮ್ಮ ವಿರೋಧ ಇದೆ ಎಂದು ಹೇಳಿದ್ದಾರೆ.
ಹಾಗೇ ಶಾಸಕ ಗೋಪಾಲಯ್ಯರ ಮೇಲೆ 1996ರಲ್ಲಿ ಬಿಜೆಪಿ ಕಾರ್ಯಕರ್ತರನ್ನು ಕೊಲೆ ಮಾಡಿಸಿದ ಆರೋಪವಿದೆ. ಶಾಸಕರ ಗೋಪಾಲಯ್ಯ ಅಪರಾಧ ಹಿನ್ನಲೆ ಉಳ್ಳವರಾಗಿದ್ದಾರೆ. ಈಗ ಮಂತ್ರಿ ಆಸೆಗಾಗಿ ಗೋಪಾಲಯ್ಯ ಬಿಜೆಪಿಗೆ ಬರ್ತಾ ಇದ್ದಾರೆ. ಅವರ ಸೇರ್ಪಡೆಯಿಂದ ಪಕ್ಷಕ್ಕೆ ಯಾವುದೇ ಲಾಭವಿಲ್ಲ. ಜೆಡಿಎಸ್ ನಿಂದ ಸವಲತ್ತು ಸ್ವೀಕರಿಸಿ ಆ ಪಕ್ಷಕ್ಕೆ ದ್ರೋಹ ಬಗೆದಿದ್ದಾರೆ.
ರಾಜ್ಯಸಭಾ ಚುನಾವಣೆಯಲ್ಲೂ ಅಡ್ಡ ಮತದಾನ ಮಾಡಿದ್ದಾರೆ. ಇಂಥವರನ್ನು ಸೇರಿಸಿಕೊಂಡರೆ ಪಕ್ಷದ ತತ್ವ ಸಿದ್ಧಾಂತಕ್ಕೆ ಬೆಲೆ ಇಲ್ಲದಂತಾಗುತ್ತದೆ ಎಂದು ವಿರೋಧಕ್ಕೆ ಕಾರಣವೇನೆಂಬುದನ್ನು ಬಿಜೆಪಿ ನಾಯಕರಿಗೆ ಬರೆದಿರುವ ಪತ್ರದಲ್ಲಿ ಕಾರ್ಯಕರ್ತರು ಉಲ್ಲೇಖಿಸಿದ್ದಾರೆ ಎನ್ನಲಾಗಿದೆ.