ರಾಜಧಾನಿಯಲ್ಲಿ ಮಳೆತಂದ ಆಪತ್ತು ಹೇಗಿತ್ತು ಗೊತ್ತಾ?

ಬುಧವಾರ, 6 ಅಕ್ಟೋಬರ್ 2021 (20:21 IST)
ಮಳೆರಾಯ ಇಡೀ ಬೆಂಗಳೂರನ್ನೆ ತಲ್ಲಣಗೊಳಿಸಿದ್ದಾನೆ. ವರುಣನ ಅಬ್ಬರ ನಗರದ ಮಂದಿಯ ನಿತ್ಯಜೀವನದ ವೇಗವನ್ನೆ ಕುಂಠಿತಗೊಳಿಸಿದೆ. ಕಳೆದ ಮೂರು ದಿನಗಳಿಂದ ಸುರಿಯುತ್ತಿರುವ ಮಳೆ, ಕಾರಿನಲ್ಲಿ ಒಡಾಡುವರಿಂದ ಹಿಡಿದು ಕಾಲಿನಲ್ಲಿ ತಿರುಗಾಡುವವರ ಪರದಾಟಕ್ಕೆ ಕಾರಣವಾಗಿದೆ‌. ರಾಜಧಾನಿಯಲ್ಲಿ ವ್ಯಾಪಕ ಮಳೆಯಿಂದ ಸಾಲು ಸಾಲು ಅನಾಹುತಗಳು ಘಟಿಸುತ್ತಿವೆ. ನೋಡಲು ಮಳೆ ಎಷ್ಟು ಚೆಂದವೋ, ಅದು ವ್ಯಾಪಕವಾದ್ರೆ ಪರಿಸ್ಥಿತಿ ಅಷ್ಟೇ ವಿಕೋಪಕ್ಕೆ ತಿರುಗುತ್ತದೆ. ಸಧ್ಯ ಬೆಂಗಳೂರಿನ ಪರಿಸ್ಥಿತಿಯು ಹಾಗೇ ಆಗಿದೆ‌. ಕಳೆದ ಮೂರು ದಿನಗಳಿಂದ ಸುರಿಯುತ್ತಿರುವ ಮಳೆಯಿಂದಾಗಿ ಜನರ ನೆಮ್ಮದಿ ಕದಡಿದೆ. ಹೌದು, ಮಳೆ ಬೆಂಗಳೂರನ್ನು ಹಿಂಡಿ ಹಿಪ್ಪೆ ಮಾಡುತ್ತಿದೆ. ಜನರ ಜೀವನದ ಜೊತೆಗೆ ಮೂಕಪ್ರಾಣಿಗಳನ್ನೂ ತನ್ನ ತಾಳಕ್ಕೆ ತಕ್ಕಂತೆ ಕುಣಿಸಿಕೊಳ್ಳುತ್ತಿದೆ. ಅಬ್ಬರದ ಮಳೆಗೆ ನಗರದ ಹಲವೆಡೆ ಅವಾಂತರಗಳು ಮುಂದುವರೆದಿದೆ. ಇಂದು ನಗರದ ಮೈಸೂರು ರಸ್ತೆಯಲ್ಲಿ ಮಳೆ ನೀರಿನ ರಭಸಕ್ಕೆ ಹಸುವೊಂದು ಕೊಚ್ಚಿ ಹೋಗಿತ್ತು.‌ ಮಳೆಯ ತೀವ್ರತೆಗೆ ರಸ್ತೆ ಕುಸಿದು ಹೋಗಿತ್ತು. ಕೆಆರ್ ಮಾರ್ಕೆಟ್ ನಲ್ಲಿ ವ್ಯಾಪಾರಿಗಳು ಹೈರಾಣಾಗಿ ಹೋಗಿದ್ದರು.

 ಅದೆಂಥವರ ಮನವನ್ನೂ ಕಲಕುವ ದೃಶ್ಯ. ನಿನ್ನೆ ರಾತ್ರಿಯಿಂದ ಎಡಬಿಡದೆ ಸುರಿಯುತ್ತಿರುವ ಮಳೆಯಿಂದಾಗಿ ನಗರದ ಸಣ್ಣ ಮತ್ತು ದೊಡ್ಡ ಕಾಲುವೆಗಳಲ್ಲಿ ನೀರು ತುಂಬಿ ಹರಿಯುತ್ತಿತ್ತು. ಜೊತೆಗೆ ಅಲ್ಲಲ್ಲಿ ರಸ್ತೆ ಕುಸಿಯುತ್ತಿದ್ದವು. ಪರಿಣಾಮ, ಆರ್ ಆರ್ ನಗರದ ವೃಷಭಾವತಿ ರಾಜಕಾಲುವೆಗೆ ಹಸು ಹಾಗೂ ಕರುವೊಂದು ಬಿದ್ದು ಜೀವನ್ಮರಣ ಹೋರಾಟ ನಡೆಸಿದವು‌. ಆದರೆ ಕರು ನೀರಿನ ರಭಸಕ್ಕೆ ಗೊತ್ತು ಗುರಿಯಲ್ಲದೆ ಕೊಚ್ಚಿ ಹೋಯಿತು. ಆದರೆ ರಾಜಕಾಲುವೆಗೆ ಬಿದ್ದು ಒದ್ದಾಡುತ್ತಿದ್ದ ಹಸುವನ್ನು ನಾಲ್ವರ ಯುವಕರ ಗುಂಪೊಂದು ರಕ್ಷಣೆ ಮಾಡಿದೆ. ಸುಮಾರು ಎರಡು ಕೀ.ಮೀ ದೂರ ಮೋರಿಯೊಳಗಿಂದಲೇ ಹರಿದು ಬಂದ ರಾಜಕಾಲುವೆಗೆ ಈ ಹಸು ಬಿದ್ದಿದೆ. ಈ ವೇಳೆ ಇದನ್ನು ಗಮನಿಸಿದ ಯುವಕನೊಬ್ಬ ಅಲ್ಲೇ ಪಕ್ಕದಲ್ಲಿದ್ದ ಜನರಿಗೆ ವಿಷಯ ಮುಟ್ಟಿಸಿ ಹಸುವನ್ನು ರಕ್ಷಿಸಿದ್ದಾನೆ.
 ಇನ್ನು  ಮಳೆಯಾರ್ಭಟಕ್ಕೆ ನಗರದ ಜ್ಞಾನ ಭಾರತಿ ಮೆಟ್ರೋ ಪಿಲ್ಲರ್ ಸಂಖ್ಯೆ 489ರ ತಳಭಾಗದಲ್ಲೇ ರಸ್ತೆ ಕುಸಿದು ಆತಂಕ ದುಪ್ಪಟ್ಟು ಮಾಡಿದೆ. ಅಲ್ದೇ, ನಗರದಲ್ಲಿ ಸುರಿದ ನಿರಂತರ ಮಳೆಗೆ ಕೆ.ಆರ್ ಮಾರುಕಟ್ಟೆಯ ವ್ಯಾಪಾರಿಗಳ ಕಣ್ಣಲ್ಲಿ ನೀರು ತರೆಸಿದೆ. ಮಹಾಲಯ ಅಮಾವಾಸ್ಯೆಯಂದು ಭರ್ಜರಿ ವ್ಯಾಪಾರದ ಕನಸಲ್ಲಿದ್ದ ವ್ಯಾಪಾರಸ್ಥರಿಗೆ ಮಳೆ ಅಡ್ಡಿಯಾಗಿ, ತಂದಿದ್ದ ವಸ್ತುಗಳೆಲ್ಲವೂ ನೀರಿನಲ್ಲಿ ಕೊಚ್ಚಿಹೋಗಿದೆ. ಮಾವಿನ ಎಲೆ, ತುಳಸಿ ಹಾರ, ಹೂವಿನ ಹಾರ ಸೇರಿದಂತೆ ಪ್ರತೀ ವಸ್ತುಗಳು ಮಳೆ ನೀರಿನಿಂದ ಹಾನಿಯಾಗಿದೆ. ಇದರಿಂದ ವ್ಯಾಪಾರವಿಲ್ಲದೇ ವ್ಯಾಪಾರಿಗಳು ಕಂಗಾಲಾಗಿ ಹೋಗಿದ್ದಾರೆ.
 ಈ ಎಲ್ಲಾ ಸಂಬಂಧ ಪ್ರತಿಕ್ರಿಯೆ ನೀಡಿದ ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತಾ, ನಗರದಲ್ಲಿ ನಿನ್ನೆ ರಾತ್ತಿಯಿಂದಲೂ ಮಳೆ ಸುರಿಯುತ್ತಿದೆ. ಮಳೆಗಾಲಕ್ಕೆ ಅಂತಲೇ 63 ನಿಯಂತ್ರಣ ಕೊಠಡಿಗಳನ್ನು ಸ್ಥಾಪನೆ ಮಾಡಲಾಗಿದೆ.ಕೊಠಡಿಗಳಿಗೆ ಕರೆ ಬಂದ ತಕ್ಷಣ ಮುಖ್ಯ ಅಭಿಯಂತರು ವಲಯ ಜಂಟಿ ಆಯುಕ್ತರು, ಸಿಬ್ಬಂದಿ ಸ್ಥಳಕ್ಕೆ ತೆರಳಿ ಸಮಸ್ಯೆ ಬಗೆಹರಿಸಬೇಕು. ನಮ್ಮ ಮುಖ್ಯ ಅಭಿಯಂತರರು ಫುಲ್ ಅಲರ್ಟ್ ಆಗಿ ಇರಬೇಕು ಅಂತ ಸೂಚನೆ ನೀಡಲಾಗಿದೆ. ಮೆಟ್ರೋ ಪಿಲ್ಲರ್ ರಸ್ತೆ ಕುಸಿತ ಕಂಡಿರುವ ಬಗ್ಗೆ ಗಂಭೀರವಾಗಿ ಪರಿಗಣಿಸಿ ನಮ್ಮ ಮೆಟ್ರೋ ಅಧಿಕಾರಿಗಳ ಜೊತೆ ಮಾತನಾಡುತ್ತೇನೆ ಎಂದರು.
 
 ಇಷ್ಟೆಲ್ಲಾ ಸಮಸ್ಯೆಗಳು ಇಂದು ನಿನ್ನೆಯಿಂದಾಗುತ್ತಿಲ್ಲ. ಮಳೆಗಾಲದಲ್ಲಿ ರಾಜಧಾನಿಯಲ್ಲಿ ಪ್ರತಿಭಾರಿ ನಡೆಯುವ, ಸೃಷ್ಟಿಯಾಗುವ ಸನ್ನಿವೇಶಗಳಿವು. ಇಂತಾ ತೊಂದರೆಗಳನ್ನ ನಿವಾರಿಸಿ ಬೆಂಗಳೂರನ್ನ ಸುರಕ್ಷಿತ ಸ್ಥಳ ಮಾಡ್ಬೇಕಿರುವ ಪಾಲಿಕೆ ಅಧಿಕಾರಿಗಳು ಮಾತ್ರ ಮೀಟಿಂಗ್ ನಲ್ಲೆ, ಮಾತಿನಲ್ಲೆ ಕಾಲಕಳೆಯುತ್ತಿದ್ದಾರೆ. ಯಾವುದಕ್ಕು ಪ್ರಾಕ್ಟಿಕಲ್ ಅಥವಾ ಪರ್ಮನೆಂಟ್ ಸಲ್ಯೂಷನ್ ಕೊಡ್ತಿಲ್ಲಾ ಅನ್ನೋದೆ ವಿಪರ್ಯಾಸ. ಇನ್ನು ಐದು ದಿನಗಳು ಮಳೆ ಮುಂದುವರೆಯಲಿದೆ ಎಂದು ಹವಾಮಾನ ಇಲಾಖೆ ಎಚ್ಚರಿಸಿದೆ‌. ಇನ್ನೈದು ದಿನಗಳಲ್ಲಿ ಅದೆಷ್ಟು ಅವಾಂತರವಾಗಲಿದ್ಯೊ ಅನ್ನೋ ಭೀತಿ ಎದುರಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ