ಕೋವಿಡ್ -19 ಟೆಸ್ಟ್ ಪೂರ್ವಭಾವಿಯಾಗಿ ಟ್ರೂನ್ಯಾಟ್ ಟೆಸ್ಟ್ ಲ್ಯಾಬ್ ಕಾರ್ಯಾರಂಭ ಮಾಡುತ್ತಿದೆ.
ಯಾದಗಿರಿ ನಗರದ ಹಳೆ ಜಿಲ್ಲಾಸ್ಪತ್ರೆ ಆವರಣದ ಜಿಲ್ಲಾ ಸಾರ್ವಜನಿಕ ಆರೋಗ್ಯ ಪ್ರಯೋಗಾಲಯದಲ್ಲಿ ಸ್ಥಾಪಿಸಿರುವ ಕೋವಿಡ್-19 ಟೆಸ್ಟ್ ಪೂರ್ವಭಾವಿಯಾಗಿ ನಡೆಸುವ ಟ್ರೂನ್ಯಾಟ್ ಟೆಸ್ಟ್ ಲ್ಯಾಬ್ ಅನ್ನು ಪಶುಸಂಗೋಪನೆ, ಹಜ್ ಮತ್ತು ವಕ್ಫ್ ಸಚಿವರು ಹಾಗೂ ಯಾದಗಿರಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಭು ಬಿ.ಚವ್ಹಾಣ್ ಉದ್ಘಾಟಿಸಿದರು.
ಟ್ರೂನ್ಯಾಟ್ ಟೆಸ್ಟ್ ಲ್ಯಾಬ್ ಪರಿಶೀಲಿಸಿದ ಸಚಿವರು, ಲ್ಯಾಬ್ ಕಾರ್ಯನಿರ್ವಹಣೆ ಕುರಿತಂತೆ ಮಾಹಿತಿ ಪಡೆದುಕೊಂಡರು. ಅಗತ್ಯ ಮುಂಜಾಗ್ರತಾ ಕ್ರಮಗಳೊಂದಿಗೆ ಮಾದರಿಗಳನ್ನು ಪರೀಕ್ಷೆ ಮಾಡಬೇಕು. ಪರೀಕ್ಷೆಯಲ್ಲಿ ಲೋಪ ಕಂಡುಬರಬಾರದು. ಸರ್ಕಾರದ ಮಾರ್ಗಸೂಚಿಗಳನ್ನು ಪಾಲಿಸಬೇಕು. ಸ್ವಚ್ಛತೆ ಜೊತೆಗೆ ಸಾಮಾಜಿಕ ಅಂತರ ಪಾಲನೆ ಮಾಡುವಂತೆ ಸೂಚಿಸಿದರು.
ಜಿಲ್ಲಾಧಿಕಾರಿ ಎಂ.ಕೂರ್ಮಾರಾವ್ ಮಾತನಾಡಿ, ಶಂಕಿತ ವ್ಯಕ್ತಿಗಳ ಮಾದರಿಗಳನ್ನು ಕೋವಿಡ್-19 ಆರ್ಟಿಫಿಸಿಯಲ್ ಲ್ಯಾಬ್‌ಗಿಂತ ಮುಂಚೆ ಟ್ರೂನ್ಯಾಟ್ ಲ್ಯಾಬ್‌ನಲ್ಲಿ ಪರೀಕ್ಷೆ ನಡೆಸಲಾಗುತ್ತದೆ. ಇಲ್ಲಿ ನೆಗೆಟಿವ್ ವರದಿ ಬಂದರೆ ನೆಗೆಟಿವ್ ಎಂದು ಪರಿಗಣಿಸಲಾಗುವುದು. ಒಂದು ವೇಳೆ ಪಾಸಿಟಿವ್ ಬಂದರೆ ಅದನ್ನು ಆರ್ಟಿಫಿಸಿಯಲ್ ಲ್ಯಾಬ್‌ಗೆ ಕಳುಹಿಸಿ ಕೋವಿಡ್-19 ಟೆಸ್ಟ್ ನಡೆಸಲಾಗುವುದು ಎಂದರು.