ಸಾಕ್ಷ್ಯವಿಲ್ಲದೆ ಸುಳ್ಳು ಆರೋಪ ಮಾಡುವುದರಲ್ಲಿ ಹುರುಳಿಲ್ಲ: ಯು.ಟಿ.ಖಾದರ್

ಸೋಮವಾರ, 18 ಸೆಪ್ಟಂಬರ್ 2017 (18:37 IST)
ಮಂಗಳೂರು: ಪ್ರತಿಪಕ್ಷದವರಿಗೆ ಸರ್ಕಾರ, ಮುಖ್ಯಮಂತ್ರಿಗಳ ಮೇಲೆ ಆರೋಪ ಮಾಡಲು ಯಾವುದೇ ಕಾರಣವಿಲ್ಲ. ಆದರೂ ಬಿಜೆಪಿಯವರು ಇಲ್ಲ ಸಲ್ಲದ ಸುಳ್ಳು ಆರೋಪಗಳನ್ನು ಮಾಡುತ್ತಿದ್ದಾರೆ ಎಂದು ಸಚಿವ ಯು.ಟಿ.ಖಾದರ್ ಹೇಳಿದ್ದಾರೆ.

ಮಂಗಳೂರಿನಲ್ಲಿ ಮಾತನಾಡಿದ ಅವರು, ನಮ್ಮ ಸರ್ಕಾರ ಐದು ವರ್ಷದ ಆಡಳಿತದಲ್ಲಿ ಭ್ರಷ್ಟಾಚಾರ ರಹಿತ ಆಡಳಿತ ನೀಡಿ ಸರ್ವರ ಪ್ರೀತಿಗೆ ಪಾತ್ರವಾಗಿದೆ. ಹೀಗಾಗಿ ಈ ಅಪಪ್ರಚಾರಕ್ಕೆ ಜನರು ಮಾನ್ಯತೆ ನೀಡುವುದಿಲ್ಲ. ಪ್ರತಿ ವಿಚಾರಕ್ಕೆ ಕೆ.ಜೆ. ಜಾರ್ಜ್ ರಾಜೀನಾಮೆ ಕೇಳಿ ಜನರಲ್ಲಿ ತಪ್ಪು ಅಭಿಪ್ರಾಯ ಮೂಡಿಸಲು ಬಿಜೆಪಿ ಯತ್ನಿಸುತ್ತಿದೆ. ಸುಪ್ರೀಂಕೋರ್ಟ್ ಕೆ.ಜೆ.ಜಾರ್ಜ್ ಆರೋಪಿಯೆಂದು ಎಲ್ಲಿಯೂ ಹೇಳಿಲ್ಲ. ಪ್ರಕರಣದ ತನಿಖೆ ಮಾಡಿ 3 ತಿಂಗಳೊಳಗೆ ವರದಿ ಸಲ್ಲಿಸಲು ಸಿಬಿಐಗೆ ತಿಳಿಸಿದೆ. ಆದರೆ ಜಾರ್ಜ್ ಹೆಸರು ಸುಪ್ರೀಂಕೋರ್ಟ್ ಎಲ್ಲಿಯೂ ಸೂಚಿಸಿಲ್ಲ ಎಂದು ಹೇಳಿದ್ದಾರೆ.

ಚುನಾವಣೆ ಸಮೀಪಿಸುತ್ತಿದ್ದಂತೆ ತಪ್ಪು ಅಭಿಪ್ರಾಯ ತರುವ ಯತ್ನ ಮಾಡುತ್ತಿದ್ದು, ಜನರ ಮಧ್ಯೆ ಗೊಂದಲ ಸೃಷ್ಠಿಸುವ ಕೆಲಸ ಮಾಡುತ್ತಿದ್ದಾರೆ. ಯಾವುದೇ ರೀತಿಯ ಭಿನ್ನಾಭಿಪ್ರಾಯ ಬಂದಲ್ಲಿ‌ ಜನರು ಒಂದೇ ಅಭಿಪ್ರಾಯಕ್ಕೆ ಬರಬಾರದು. ಜನ ಸಾಮಾನ್ಯರು, ಹಿರಿಯರು ತಾಳ್ಮೆಯಿಂದಿರಬೇಕು. ಜನರು ನೈಜ ಆರೋಪಿಗಳನ್ನು ಪತ್ತೆ ಹಚ್ಚುವಲ್ಲಿ ಕೈಜೋಡಿಸಬೇಕು. ಸರ್ಕಾರದ ತಪ್ಪಿದ್ದಲ್ಲಿ ಪ್ರತಿ ಪಕ್ಷ ಆಧಾರ ಸಮೇತ ಮುಂದಿಡಬೇಕು. ಅದನ್ನು ಬಿಟ್ಟು ಸುಮ್ಮನೆ ಬಾಯಿ ಮಾತಲ್ಲಿ ಹೇಳುವುದಲ್ಲ ಎಂದು ಹೇಳಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ