ಡಾ ಸಿಎನ್ ಮಂಜುನಾಥ್ ಲೋಕಸಭೆ ಸ್ಪರ್ಧೆ ಖಚಿತ: ಘೋಷಣೆಯಷ್ಟೇ ಬಾಕಿ

Krishnaveni K

ಬುಧವಾರ, 6 ಮಾರ್ಚ್ 2024 (09:20 IST)
ಬೆಂಗಳೂರು: ಜಯದೇವ ಆಸ್ಪತ್ರೆಯ ಮಾಜಿ ನಿರ್ದೇಶಕ, ಎಷ್ಟೋ ಬಡವರ ಪಾಲಿಗೆ ಬೆಳಕಾಗಿದ್ದ ಡಾ ಸಿಎನ್ ಮಂಜುನಾಥ್ ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸುವುದು ಬಹುತೇಕ ಖಚಿತವಾಗಿದೆ.

ಈ ಬಾರಿ ಲೋಕಸಭೆ ಚುನಾವಣೆಯಲ್ಲಿ ಮಂಡ್ಯ ಅಥವಾ ಬೆಂಗಳೂರು ಗ್ರಾಮಾಂತರ ಕ್ಷೇತ್ರದಿಂದ ಡಾ ಸಿಎನ್‍ ಮಂಜುನಾಥ್ ಸ್ಪರ್ಧಿಸಲಿದ್ದಾರೆ ಎಂದು ಹಲವು ಸಮಯದಿಂದ ಮಾತುಗಳು ಕೇಳಿಬರುತ್ತಲೇ ಇತ್ತು. ಜೆಡಿಎಸ್ ನಿಂದ ಅವರು ಸ್ಪರ್ಧಿಸಲಿದ್ದಾರೆ ಎಂಬ ಮಾತುಗಳಿತ್ತು. ಅದೀಗ ನಿಜವಾಗುವ ಲಕ್ಷಣ ಕಾಣುತ್ತಿದೆ.

ಮಂಜುನಾಥ್ ಸ್ಪರ್ಧೆ ಬಗ್ಗೆ ಜೆಡಿಎಸ್ ನಾಯಕ ಕುಮಾರಸ್ವಾಮಿ ಮನೆಯಲ್ಲಿ ಚರ್ಚೆಯಾಗಿ ಎಂದು ತಿಳಿದುಬಂದಿದೆ. ಮೈತ್ರಿ ಪಕ್ಷ ಬಿಜೆಪಿಯೂ ಮಂಜುನಾಥ್ ಸ್ಪರ್ಧೆಗೆ ಹಸಿರು ನಿಶಾನೆ ತೋರಿದೆ. ಕ್ಲೀನ್ ಚಿಟ್ ಇರುವ, ಸಮಾಜದಲ್ಲಿ ಗೌರವವಿರುವ ವ್ಯಕ್ತಿ ಚುನಾವಣೆಗೆ ಸ್ಪರ್ಧಿಸಿದರೆ ಜನ ಖಂಡಿತಾ ಬೆಂಬಲಿಸುತ್ತಾರೆ.

ಮಂಜುನಾಥ್ ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡರ ಅಳಿಯ. ಆದರೆ ತಮ್ಮ ವೃತ್ತಿ ಜೀವನದಲ್ಲಿ ಒಮ್ಮೆಯೂ ದೇವೇಗೌಡರ ಪ್ರಭಾವ ಬಳಸದೇ ತಮ್ಮ ಸ್ವಂತ ವ್ಯಕ್ತಿತ್ವ, ಕೆಲಸದಿಂದಾಗಿ ಜನ ಮನಗೆದ್ದವರು. ಅವರು ಯಾವ ಪಕ್ಷದಿಂದ ಸ್ಪರ್ಧಿಸಿದರೂ ಜನ ಬೆಂಬಲಿಸಬಹುದು ಎಂಬ ವಿಶ್ವಾಸವಿದೆ. ಸ್ವತಃ ಪ್ರಧಾನಿ ಮೋದಿ ಮತ್ತು ಅಮಿತ್ ಶಾ ಕೂಡಾ ಮಂಜುನಾಥ್ ಸ್ಪರ್ಧೆಗೆ ಒಲವು ಹೊಂದಿದ್ದಾರೆ. ಹೀಗಾಗಿ ಡಾ ಮಂಜುನಾತ್ ಸ್ಪರ್ಧೆ ಬಹುತೇಕ ಖಚಿತವಾಗಿದ್ದು, ಈಗ ಅಧಿಕೃತ ಘೋಷಣೆಯೊಂದೇ ಬಾಕಿ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ