ನಾರಾಯಣ ಹೆಲ್ತ್ 1 ಕೋಟಿ ರೂ ಗಳ ಅದಿತಿ ಆರೋಗ್ಯ ವಿಮೆ: ಯಾರೆಲ್ಲಾ ಅಪ್ಲೈ ಮಾಡಬಹುದು ಇಲ್ಲಿದೆ ಡೀಟೈಲ್ಸ್

Krishnaveni K

ಬುಧವಾರ, 3 ಜುಲೈ 2024 (16:34 IST)
ಬೆಂಗಳೂರು: ಇತ್ತೀಚೆಗಿನ ದಿನಗಳಲ್ಲಿ ವೈದ್ಯಕೀಯ ವೆಚ್ಚವೇ ಎಲ್ಲರಿಗೂ ಹೊರೆಯಾಗಿದೆ. ಹೀಗಾಗಿ ಹೆಲ್ತ್ ಇನ್ಶೂರೆನ್ಸ್ ಮಾಡಿಸಿಕೊಳ್ಳುವುದು ಅತೀ ಅಗತ್ಯ. ಇದೇ ಕಾರಣಕ್ಕೆ ನಾರಾಯಣ ಹೆಲ್ತ್ ಸೆಂಟರ್ ಅದಿತಿ ಎಂಬ ವಿಶಿಷ್ಟ ಆರೋಗ್ಯ ವಿಮೆ ಯೋಜನೆಯೊಂದನ್ನು ಹೊರತಂದಿದೆ.

ಇದುವರೆಗೆ ಈ ರೀತಿ ಆಸ್ಪತ್ರೆ ಸಮೂಹ ಸಂಸ್ಥೆಯೊಂದು ಆರೋಗ್ಯ ವಿಮೆ ಹೊರತಂದಿದ್ದು ವಿರಳ. ಆದರೆ ನಾರಾಯಣ ಹೆಲ್ತ್ ಮುಖ್ಯಸ್ಥ ಡಾ. ದೇವಿಶೆಟ್ಟಿ ಇಂತಹದ್ದೊಂದು ಪ್ರಯತ್ನಕ್ಕೆ ಕೈ ಹಾಕಿದ್ದಾರೆ. 1 ಕೋಟಿ ರೂ.ವರೆಗೆ ಕವರ್ ಆಗುವ ಅದಿತಿ ಎನ್ನುವ ಆರೋಗ್ಯ ವಿಮೆ ಯೋಜನೆಯೊಂದನ್ನು ಡಾ ದೇವಿ ಶೆಟ್ಟಿ ನೇತೃತ್ವದ ನಾರಾಯಣ ಹೆಲ್ತ್ ಹೊರತಂದಿದೆ. ಇದರಿಂದ ವೈದ್ಯಕೀಯ ವೆಚ್ಚ ಭರಿಸಲು ಹೆಣಗಾಡುತ್ತಿರುವ ಎಷ್ಟೋ ಜನರ ಬವಣೆ ತಪ್ಪುತ್ತದೆ ಎನ್ನುವುದು ಅವರ ಅಭಿಪ್ರಾಯ.

ಸದ್ಯಕ್ಕೆ ಐದು ಜಿಲ್ಲೆಗಳಿಗೆ ಮಾತ್ರ ಅನ್ವಯ
ಸದ್ಯಕ್ಕೆ ರಾಜ್ಯದ ಐದು ಜಿಲ್ಲೆಗಳಲ್ಲಿ ಈ ಆರೋಗ್ಯ ವಿಮೆ ಯೋಜನೆಯನ್ನು ಹೊರತರಲಾಗಿದೆ. ಮೈಸೂರು, ಮಂಡ್ಯ, ಚಾಮರಾಜ ನಗರ, ಕೊಡಗು ಮತ್ತು ಹಾಸನ ಜಿಲ್ಲೆಗಳಲ್ಲಿ ಮಾತ್ರ ಈ ಯೋಜನೆಯನ್ನು ಹೊರತರಲಾಗಿದೆ. ಕೆಲವೇ ದಿನಗಳಲ್ಲಿ ಬೆಂಗಳೂರಿನಲ್ಲಿ ಈ ಯೋಜನೆಯನ್ನು ಹೊರತರಲು ನಾರಾಯಣ ಹೆಲ್ತ್ ಸಂಸ್ಥೆ ಉದ್ದೇಶಿಸಿದೆ. ಇದಕ್ಕಾಗಿ ತಯಾರಿಗಳು ಆರಂಭವಾಗಿದೆ.

ನಾರಾಯಣ ಹೆಲ್ತ್ ಸೆಂಟರ್ ನಲ್ಲಿ ಈ ಸೇವೆ
ಮುಂದಿನ ದಿನಗಳಲ್ಲಿ ನಾರಾಯಣ ಹೆಲ್ತ್ ಸೆಂಟರ್ ಇರುವ ದೇಶದ ಎಲ್ಲಾ ಆಸ್ಪತ್ರೆಗಳಲ್ಲಿ ಈ ಆರೋಗ್ಯ ವಿಮೆಯ ಪ್ರಯೋಜನ ಪಡೆಯಬಹುದಾಗಿದೆ. ಸದ್ಯಕ್ಕೆ ಪ್ರಯೋಗಾರ್ಥವಾಗಿ ಐದು ಜಿಲ್ಲೆಗಳಲ್ಲಿ ಜಾರಿಗೆ ತರಲಾಗಿದೆ. ಮುಂದೆ ನಾರಾಯಣ ಹೆಲ್ತ್ ಸಂಸ್ಥೆ ಇರುವ ಎಲ್ಲಾ ರಾಜ್ಯ, ಕೇಂದ್ರಗಳಲ್ಲಿ ಆರೋಗ್ಯ ವಿಮೆ ವಿಸ್ತರಣೆಯಾಗಲಿದೆ.

ಪಾಲಿಸಿ ಖರೀದಿಸಲು 45 ವರ್ಷ ಗರಿಷ್ಠ ವಯಸ್ಸು
ಪಾಲಿಸಿ ಖರೀದಿ ಮಾಡಲು ಗರಿಷ್ಠ ವಯೋಮಿತಿ 45 ಮತ್ತು ಕನಿಷ್ಠ ವಯೋಮಿತಿ 18 ಆಗಿರಲಿದೆ. ಗಂಡ-ಹೆಂಡತಿ, ಇಬ್ಬರು ಮಕ್ಕಳು ಇರುವ ಒಂದು ಕುಟುಂಬ ಈ ಆರೋಗ್ಯ ವಿಮೆಗೆ ಅಪ್ಲೈ ಮಾಡಬಹುದು. ಪ್ರೀಮಿಯಮ್ ಸದ್ಯಕ್ಕೆ ಒಂದೊಂದು ಜಿಲ್ಲೆಗೆ ವ್ಯತ್ಯಸ್ಥವಾಗಿರಲಿದೆ. ಒಂದು ವರ್ಷಕ್ಕೆ 10-12 ಸಾವಿರದವರೆಗೆ ಪ್ರೀಮಿಯಮ್ ಪಾವತಿ ಮಾಡಬೇಕಾಗಬಹುದು ಎಂದು ನಾರಾಯಣ ಸಂಸ್ಥೆ ಆರೋಗ್ಯ ವಿಮೆ ವಿಭಾಗ ಮಾಹಿತಿ ನೀಡಿದೆ. 45 ವರ್ಷ ಮೇಲ್ಪಟ್ಟವರಿಗೆ ಪ್ರೀಮಿಯಂ ಹಣವೂ ಹೆಚ್ಚಾಗಲಿದೆ. 45 ವರ್ಷ ಒಳಗಿನವರಿಗೆ ವರ್ಷಕ್ಕೆ 10 ಸಾವಿರದವರೆಗೆ ಪ್ರೀಮಿಯಂ ವೆಚ್ಚವಾಗಲಿದೆ. ಇತರೆ ಮಾಹಿತಿಗೆ ನಾರಾಯಣ ಹೆಲ್ತ್ ಸಹಾಯವಾಣಿಗೆ ಕರೆ ಮಾಡಿ ಮಾಹಿತಿ ಪಡೆದುಕೊಳ್ಳಬಹುದು.

ಆಯುಷ್ ಚಿಕಿತ್ಸೆ ಇದರಲ್ಲಿ ಕವರ್ ಆಗುವುದಿಲ್ಲ
ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳ ಪಟ್ಟಿಯಲ್ಲಿರುವ ದೇಶದ ನಾಗರಿಕರಿಗೂ ಆಯುಷ್ ವಿಮೆ ಲಭ್ಯವಿದೆ. ಇತರ ಖಾಸಗಿ ಆರೋಗ್ಯ ವಿಮಾ ಪಾಲಿಸಿಗಳು ಆಯುಷ್ ಚಿಕಿತ್ಸೆಯ ಮೂಲಕ ಮಾಡಿದ ಚಿಕಿತ್ಸೆಯ ವೆಚ್ಚವನ್ನು ಸಹ ಒಳಗೊಂಡಿರುತ್ತವೆ. ಆದರೆ, ನಾರಾಯಣ ಹೆಲ್ತ್‌ಕೇರ್‌ನ ಅದಿತಿ ಪಾಲಿಸಿಯು ಆಯುಷ್ ಚಿಕಿತ್ಸೆಯನ್ನು ಒಳಗೊಂಡಿಲ್ಲ.

ಹೊಸ ಆರೋಗ್ಯ ವಿಮೆ ನಿಯಮಗಳು ಇದಕ್ಕೆ ಅನ್ವಯವಾಗಲ್ಲ

 

ಏಪ್ರಿಲ್ 1, 2024 ರಿಂದ ಆರೋಗ್ಯ ವಿಮಾ ಪಾಲಿಸಿಗಳಿಗೆ ಹೊಸ ನಿಯಮಗಳನ್ನು ಜಾರಿಗೆ ತರಲಾಗಿದೆ, ಇದರಲ್ಲಿ ಆರೋಗ್ಯ ವಿಮೆಯನ್ನು ಖರೀದಿಸಲು ಗರಿಷ್ಠ ವಯಸ್ಸಿನ ನಿರ್ಬಂಧವನ್ನು ರದ್ದುಗೊಳಿಸಲಾಗಿದೆ. ಅಂದರೆ ಈಗ ಯಾವುದೇ ವಯಸ್ಸಿನ ವ್ಯಕ್ತಿಯು ಹೊಸ ಆರೋಗ್ಯ ವಿಮಾ ಪಾಲಿಸಿಯನ್ನು ಖರೀದಿಸಬಹುದು. ಮೊದಲು ವಿಮೆಯನ್ನು ಖರೀದಿಸಲು ಗರಿಷ್ಠ ವಯಸ್ಸು 65 ವರ್ಷಗಳು. ಆದಾಗ್ಯೂ, ನಾರಾಯಣ ಹೆಲ್ತ್‌ನ ಅದಿತಿ ಪಾಲಿಸಿಯ ಅಡಿಯಲ್ಲಿ, ನೀವು 45 ವರ್ಷ ವಯಸ್ಸಿನವರೆಗೆ ಮಾತ್ರ ಪ್ರೀಮಿಯಂ ತೆಗೆದುಕೊಳ್ಳಬಹುದು.

 

ಆದಾಗ್ಯೂ, IRDAI ನ ಹೊಸ ನಿಯಮಗಳ ಪ್ರಕಾರ, ಆರೋಗ್ಯ ವಿಮೆ ಕಾಯುವ ಅವಧಿಯನ್ನು 48 ತಿಂಗಳ ಬದಲಿಗೆ 36 ತಿಂಗಳಿಗೆ ಇಳಿಸಲಾಗಿದೆ. ಆದರೆ ಈ ಅದಿತಿ ಪಾಲಿಸಿಯಲ್ಲಿ ಯಾವುದೇ ವೇಟಿಂಗ್ ಪೀರಿಯಡ್ ಇಲ್ಲ ಅಂದರೆ ಮೊದಲ ದಿನದಿಂದಲೇ ವಿಮೆ ಕವರ್ ಆಗುತ್ತದೆ. ಇತರ ಆರೋಗ್ಯ ವಿಮಾ ಪಾಲಿಸಿಗಳು ತಮ್ಮ ಕಾಯುವ ಅವಧಿಯನ್ನು ಕಡಿಮೆ ಮಾಡಿದರೆ, ರೋಗಿಗಳು ಸಕಾಲಿಕ ಚಿಕಿತ್ಸೆಯನ್ನು ಪಡೆಯಬಹುದು.

 
ಈ ಆರೋಗ್ಯ ವಿಮೆ ಯಾವುದನ್ನೆಲ್ಲಾ ಕವರ್ ಮಾಡುತ್ತೆ?

ಸಾಮಾನ್ಯವಾಗಿ ಆರೋಗ್ಯ ವಿಮೆಯಲ್ಲಿ ಒಂದು ದಿನ ಆಸ್ಪತ್ರೆಯಲ್ಲಿ ಅಡ್ಮಿಷನ್ ಆಗಿದ್ದರೆ ಮಾತ್ರ ಪ್ರಯೋಜನ ಸಿಗುತ್ತದೆ. ಆದರೆ ನಾರಾಯಣ ಹೆಲ್ತ್ ಇನ್ಶೂರೆನ್ಸ್ ಈ ವಿಚಾರದಲ್ಲಿ ಭಿನ್ನ ಪ್ರಯೋಗ ಮಾಡಿದೆ. ಡೇ ಕೇರ್ ಕೂಡಾ ಇದರಲ್ಲಿ ಕವರ್ ಆಗಲಿದೆ. ಅಂದರೆ ವೈದ್ಯಕೀಯ ಪರೀಕ್ಷೆಗಾಗಿ ಅಥವಾ ಡ್ರಿಪ್ಸ್ ಹಾಕಿಸಿಕೊಳ್ಳಲು ಒಂದು ದಿನ ಹಗಲು ಆಸ್ಪತ್ರೆಯಲ್ಲಿರಬೇಕಾದರೂ ಅದನ್ನೂ ಕವರ್ ಮಾಡಿಕೊಳ್ಳಬಹುದು. ಇತರೆ ಆರೋಗ್ಯ ಸಮಸ್ಯೆಗಳಿಗೆ 5 ಲಕ್ಷ ರೂ.ಗಳವರೆಗೆ ಮತ್ತು ಶಸ್ತ್ರಚಿಕಿತ್ಸೆ ವೆಚ್ಚ 1 ಕೋಟಿ ರೂ.ವರೆಗೂ ಕವರ್ ಮಾಡಲಿದೆ. ಆದರೆ ಇತರೆ ಆರೋಗ್ಯ ವಿಮೆಯಂತೆ ಇದರಲ್ಲೂ ಹೆರಿಗೆ ವೆಚ್ಚ ಭರಿಸಲಾಗುವುದಿಲ್ಲ ಎಂದು ನಾರಾಯಣ ಹೆಲ್ತ್ ಮಾಹಿತಿ ನೀಡಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ