ಮುಸ್ಲಿಂ ಮಹಿಳೆಗೆ ಡ್ರಾಪ್ ; ಯುವಕನಿಗೆ ಹಲ್ಲೆ ..ಜನರಲ್ಲಿ ಭಯ ಮೂಡಿಸಲು ಕೃತ್ಯ!!

ಬುಧವಾರ, 22 ಸೆಪ್ಟಂಬರ್ 2021 (21:31 IST)
ಮುಸ್ಲಿಂ ಮಹಿಳೆಗೆ ಡ್ರಾಪ್ ನೀಡುತ್ತಿದ್ದ ಕಾರಣಕ್ಕೆ ಬೈಕ್ ಸವಾರನ ಮೇಲೆ ಹಲ್ಲೆ ನಡೆಸಿದ ಪ್ರಕರಣದಲ್ಲಿ ಪೊಲೀಸರು ಇಬ್ಬರು ಆರೋಪಿಗಳ ವಿರುದ್ಧ ಕಠಿಣ ಸೆಕ್ಷನ್ ಗಳಡಿ ಕೇಸು ದಾಖಲಿಸಿದ್ದಾರೆ. ಯುವಕ ಮತ್ತು ಮಹಿಳೆಗೆ ನಿಂದಿಸಿದ್ದ ಪ್ರಕರಣದಲ್ಲಿ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿತ್ತು. 
ಆರೋಪಿಗಳಾದ ಸೊಹೇಲ್ ಹಾಗೂ ನಯಾಜ್ ವಿರುದ್ಧ ಎಫ್‌ಐಆರ್ ದಾಖಲಾಗಿದ್ದು ಪ್ರಚಾರಕ್ಕಾಗಿ ಈ ಕೃತ್ಯವನ್ನು ಮಾಡಿದ್ದಾಗಿ ಹೇಳಿಕೆ ನೀಡಿದ್ದರು. ಅಲ್ಲದೆ, ಈ ರೀತಿ ಕೆಲಸಗಳಿಂದ ಜನರಲ್ಲಿ ಭಯ ಮೂಡಿಸುವುದು ಮತ್ತು ತಮ್ಮ ಸಂಘಟನೆಯ ಬಗ್ಗೆ ರಾಜ್ಯದಾದ್ಯಂತ ಪ್ರಚುರಪಡಿಸುವುದು ಉದ್ದೇಶ ಇತ್ತು ಎಂದು ಪೊಲೀಸರಲ್ಲಿ ತಪ್ಪೊಪ್ಪಿಕೊಂಡಿದ್ದಾರೆ ಎನ್ನಲಾಗಿದೆ.ಆರೋಪಿಗಳ ವಿರುದ್ಧ ಮಹಿಳೆ ದೂರು ನೀಡಿದ್ದು ಏಳು ವಿವಿಧ ಸೆಕ್ಷನ್ ಗಳಡಿ ಕೇಸ್ ದಾಖಲಿಸಿದ್ದಾರೆ. ಐಪಿಸಿ ಸೆಕ್ಷನ್ 153(ಎ) ಎರಡು ಧರ್ಮಗಳ ನಡುವೆ ದ್ವೇಷ ಹರಡುವುದು, ಸೆಕ್ಷನ್ 506- ಜೀವ ಬೆದರಿಕೆ, 341- ಅಕ್ರಮ ತಡೆ, 34- ಜನರನ್ನು ಗುರಿಯಾಗಿಸಿ ನೋವುಂಟು ಮಾಡುವುದು, 504 ಮಾನಹಾನಿ, 323- ಮನಸ್ಸಿಗೆ ಘಾಸಿಗೊಳಿಸುವುದು ಹಾಗೂ 354ರಡಿ ಮಹಿಳೆ ಮೇಲೆ ದೌರ್ಜನ್ಯ ಆರೋಪದಲ್ಲಿ ಎಫ್‌ಐಆರ್ ದಾಖಲಾಗಿದೆ. 
ಬುರ್ಖಾಧಾರಿ ಮಹಿಳೆಗೆ ಬೈಕಿನಲ್ಲಿ ಡ್ರಾಪ್‌ ಕೊಡುತ್ತಿದ್ದ ವೇಳೆ ಹಲ್ಲೆ ನಡೆಸಿದ್ದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿತ್ತು. ಅದರಲ್ಲಿ ಮಹಿಳೆಯನ್ನು ನಿಂದಿಸಿದ್ದಲ್ಲದೆ, ಆಕೆಯ ಗಂಡನ ಫೋನ್ ನಂಬರ್ ಪಡೆದು ದಬಾಯಿಸುವ ಚಿತ್ರಣ ದಾಖಲಾಗಿತ್ತು. ಹಿಂದು ಯುವಕನ ಜೊತೆಗೆ ತೆರಳುತ್ತಿದ್ದುದನ್ನು ಆಕ್ಷೇಪಿಸಿದ್ದಕ್ಕೆ, ಮನೆ ಹತ್ತಿರ ಇದ್ದಾರೆ, ಅದೇ ದಾರಿಯಲ್ಲಿ ಹೋಗುವುದರಿಂದ ತೆರಳುತ್ತಿದ್ದೇನೆ ಎಂದು ಮಹಿಳೆ ಹೇಳಿದ್ದರು. ಆನಂತರ ಆಕೆಯನ್ನು ಬೈಕಿನಿಂದ ಇಳಿಸಿ, ಆಟೋದಲ್ಲಿ ಕಳಿಸಿಕೊಡಲಾಗಿತ್ತು. 
ಪ್ರಕರಣವನ್ನು ಗಂಭೀರ ಪರಿಗಣಿಸಿದ್ದ ಬೆಂಗಳೂರು ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿದ್ದರು. ಈ ಬಗ್ಗೆ ಸಿಎಂ ಬಸವರಾಜ್‌ ಬೊಮ್ಮಾಯಿ ಕೂಡ ಟ್ವೀಟ್‌ ಮಾಡಿದ್ದು, ಆರೋಪಿಗಳ ವಿರುದ್ದ ಕಠಿಣ ಕ್ರಮಕ್ಕೆ ಸೂಚನೆ ನೀಡಿದ್ದರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ