ಸಿಎಂ ಸಿದ್ದರಾಮಯ್ಯ ಸರಕಾರದ ಸಾಧನೆ ಶೂನ್ಯ: ಈಶ್ವರಪ್ಪ ವಾಗ್ದಾಳಿ
ಸೋಮವಾರ, 20 ಮಾರ್ಚ್ 2017 (16:49 IST)
ಮುಖ್ಯಮಂತ್ರಿ ಸಿದ್ದರಾಮಯ್ಯ ಅಧಿಕಾರವಹಿಸಿಕೊಂಡ ನಾಲ್ಕು ವರ್ಷಗಳ ಅವಧಿಯಲ್ಲಿ ಸರಕಾರದ ಸಾಧನೆ ಶೂನ್ಯವಾಗಿದೆ ಎಂದು ವಿಧಾನಪರಿಷತ್ ವಿಪಕ್ಷ ನಾಯಕ ಕೆ.ಎಸ್.ಈಶ್ವರಪ್ಪ ವಾಗ್ದಾಳಿ ನಡೆಸಿದ್ದಾರೆ.
ಸಿಎಂ ಸಿದ್ರಾಮಯ್ಯ ಸರಕಾರಕ್ಕೆ ನೀರಾವರಿ ಬಗ್ಗೆ ಆಸಕ್ತಿಯಿಲ್ಲ. ಸರಕಾರದ ನಿರ್ಲಕ್ಷ್ಯ ಧೋರಣೆಯಿಂದ ರಾಜ್ಯದ ರೈತರು ಸಂಕಷ್ಟದಲ್ಲಿದ್ದಾರೆ. ಬರಗಾಲದಿಂದ ತತ್ತರಿಸಿರುವ ರೈತರಿಗೆ ಪರಿಹಾರ ಕೊಡುವ ಸೌಜನ್ಯ ಕೂಡಾ ಸರಕಾರ ತೋರಿಲ್ಲ ಎಂದು ಕಿಡಿಕಾರಿದರು.
ಕಾಟಾಚಾರಕ್ಕೆ ಸರಕಾರ ಬಜೆಟ್ ಮಂಡಿಸಿದೆ. ನೀರಾವರಿ ಯೋಜನೆಗಳ ಬಗ್ಗೆ ಸರಕಾರ ದಿವ್ಯ ಅಸಡ್ಡೆ ತೋರಿದೆ. ಹಿಂದಿನ ಯೋಜನೆಗಳನ್ನು ಪೂರ್ಣಗೊಳಿಸದ ಸರಕಾರ ಹೊಸ ಯೋಜನೆಗಳನ್ನು ಘೋಷಿಸಿದೆ ಎಂದು ಲೇವಡಿ ಮಾಡಿದ್ದಾರೆ.
ಎತ್ತಿನಹೊಳೆ ಯೋಜನೆಯಲ್ಲಿ ಯಾವುದೇ ಕಾಮಗಾರಿ ಆರಂಭಿಸದಿದ್ದರೂ ಹಣ ವೆಚ್ಚವಾಗಿದೆ ಎನ್ನುವುದನ್ನು ಸರಕಾರ ತೋರಿಸುತ್ತಿದೆ. ಮಹದಾಯಿ ಯೋಜನೆಯಲ್ಲಿ ಪಕ್ಷಾತೀತವಾಗಿ ಪರಿಹರಿಸದೆ ಅದರಲ್ಲೂ ರಾಜಕೀಯ ಮಾಡುತ್ತಿದೆ ಎಂದು ಕಿಡಿಕಾರಿದರು.
ಕಾಂಗ್ರೆಸ್ ಸರಕಾರದಲ್ಲಿ ಕಂಟ್ರ್ಯಾಕ್ಟರ್‌ಗಳು ಸೇರಿದಂತೆ ಯಾರಿಗೂ ಭಯವಿಲ್ಲದಂತಾಗಿದೆ. ಕಪ್ಪು ಪಟ್ಟಿಯಲ್ಲಿ ಹಾಕಿದರೆ ದಾರಿಗೆ ಬರ್ತಾರೆ. ಹಣ ಎಲ್ಲಿ ಹರಿದು ಹೋಗುತ್ತಿದೆ ಎನ್ನುವುದೇ ಗೊತ್ತಾಗುತ್ತಿಲ್ಲ ಎಂದು ವಿಪಕ್ಷ ನಾಯಕ ಕೆ.ಎಸ್.ಈಶ್ವರಪ್ಪ ಗುಡುಗಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.