ಜಮೀರ್ ಅಹ್ಮದ್ ಮನೆ ಮೇಲೆ ED Raid ಅಂತ್ಯ

ಶುಕ್ರವಾರ, 6 ಆಗಸ್ಟ್ 2021 (08:40 IST)
ಬೆಂಗಳೂರು: ಚಾಮರಾಜಪೇಟೆಯ ಕಾಂಗ್ರೆಸ್ ಶಾಸಕ ಜಮೀರ್ ಅಹ್ಮದ್ ಖಾನ್ ಮನೆ ಕಚೇರಿ ಮೇಲೆ ನಡೆದಿದ್ದ ಇ.ಡಿ ಅಧಿಕಾರಿಗಳ ದಾಳಿ ಅಂತ್ಯಗೊಂಡಿದೆ. ಸತತ 23 ಗಂಟೆಗಳ ಕಾಲ ನಡೆದ ಶೋಧದ ಬಳಿಕ ಇಡಿ ಅಧಿಕಾರಿಗಳು ಜಮೀರ್ ಮನೆಯಿಂದ ವಾಪಸ್ ಹೋಗಿದ್ದಾರೆ.

ನಿನ್ನೆ ಮುಂಜಾನೆ ಆರು ಗಂಟೆಗೆ ಇನೋವಾ ಕಾರ್ನಲ್ಲಿ ಜಮೀರ್ ಖಾನ್ ಮನೆಗೆ ಬಂದಿದ್ದ ಆರು ಜನ ಇಡಿ ಅಧಿಕಾರಿಗಳ ತಂಡ ಸತತ 23 ಗಂಟೆಗಳ ಕಾಲ ಶೋಧ ನಡೆಸಿತ್ತು. ಒಟ್ಟು ನಾಲ್ಕು ಕಾರುಗಳಲ್ಲಿ ಬಂದಿದ್ದ ಇಡಿ ಅಧಿಕಾರಿಗಳ ತಂಡ ಸಿಆರ್ಪಿಎಫ್ ಸಿಬ್ಬಂದಿಯೊಂದಿಗೆ ಜಮೀರ್ ಮನೆ, ಕಚೇರಿ, ಫ್ಲ್ಯಾಟ್, ಅವರ ಒಡೆತನದ ನ್ಯಾಷನಲ್ ಟ್ರಾವೆಲ್ಸ್ ಕಚೇರಿ ಸೇರಿದಂತೆ ವಿವಿಧೆಡೆ ದಾಖಲೆಗಳನ್ನು ಪರಿಶೀಲನೆ ನಡೆಸಿತ್ತು. ಅಧಿಕಾರಿಗಳ ಪರಿಶೀಲನೆ ಮುಗಿದ ನಂತರ ಮನೆಯಿಂದ ಹೊರಬಂದ ಶಾಸಕ ಜಮೀರ್ ಅಹಮದ್ ಖಾನ್ ಮೊದಲ ಬಾರಿಗೆ ಈ ಬಗ್ಗೆ ಮಾತನಾಡಿದ್ದಾರೆ.
ದಾಳಿ ಕುರಿತು ಸುದ್ದಿಗಾರರೊಂದಿಗೆ ಮಾಹಿತಿ ಹಂಚಿಕೊಂಡ ಜಮೀರ್, ‘ನಾನು ಇಡಿ ಅಧಿಕಾರಿಗಳು ಕೇಳಿದ ಎಲ್ಲಾ ಪ್ರಶ್ನೆಗಳಿಗೆ ಉತ್ತರಿಸಿದ್ದೇನೆ. ಅವರು ಕೇಳಿದ ಮಾಹಿತಿ, ದಾಖಲೆ ಕೊಟ್ಟಿದ್ದೇನೆ. ಆದರೆ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ಕೊಟ್ಟಿಲ್ಲ. ನನ್ನ ಮನೆ ವಿಚಾರಕ್ಕೆ ಹಲವು ದೂರು ಬಂದಿದೆ, ಅದಕ್ಕೆ ಬಂದಿದ್ದಾರೆ. ನಾನು ನನ್ನ ಮನೆಯನ್ನು ಸಂಪೂರ್ಣವಾಗಿ ಅಧಿಕೃತ ಹಣದಿಂದಲೇ ಕಟ್ಟಿರುವುದು. ಈ ಬಗ್ಗೆ ಎಲ್ಲಾ ದಾಖಲೆ ತೋರಿಸಿದ್ದೇನೆ, ನಾನು ನೀಡಿದ ದಾಖಲೆಗೆ ಸಮಾಧಾನ ಆಗಿ ಹೋಗಿದ್ದಾರೆ. ಇಡಿ ಅಧಿಕಾರಿಗಳು ಮನೆಯನ್ನು ಸಂಪೂರ್ಣವಾಗಿ ಸರ್ಚ್ ಮಾಡಿದ್ದಾರೆ, ನನ್ನ ಹಾಗೂ ನನ್ನ ಸಹೋದರರ ಮನೆಯಲ್ಲೂ ಸರ್ಚ್ ಮಾಡಿದ್ದಾರೆ. ಆದರೆ ಅವರಿಗೆ ಏನೂ ಸಿಕ್ಕಿಲ್ಲ. ಮನೆ ಯಾವಾಗ ತಗೊಂಡ್ರಿ, ಪೇಮೆಂಟ್ ಹೇಗೆ ಮಾಡಿದ್ರಿ ಅಂತ ಪ್ರಶ್ನೆಗಳನ್ನು ಕೇಳಿದ್ರು ಎಂದು ಜಮೀರ್ ಹೇಳಿದ್ದಾರೆ.

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ