ಮೊಟ್ಟೆ ಅಂದ್ರೆ ಯಾರಿಗಿಷ್ಟ ಇಲ್ಲ ಹೇಳಿ, ಬಹುತೇಕರು ಮೊಟ್ಟೆ ತಿನ್ನೋರೆ. ಅದರಲ್ಲೂ ರಾಜ್ಯ ರಾಜಧಾನಿ ಬೆಂಗಳೂರು ನಗರವೊಂದರಲ್ಲೇ ಮೊಟ್ಟೆಯಿಂದ ಕೋಟ್ಯಂತರ ರೂಪಾಯಿ ವಹಿವಾಟು ಪ್ರತಿನಿತ್ಯ ನಡೆಯುತ್ತದೆ. ಅಂತಹದ್ದರಲ್ಲಿ ಮೊಟ್ಟೆಗೂ ಈಗ ಬೆಲೆ ಏರಿಕೆಯ ಬಿಸಿ ತಟ್ಟಿದೆ. ಬೆಂಗಳೂರಿನಲ್ಲಿ ಮೊಟ್ಟೆಯ ಬೆಲೆ ಏರಿಕೆಯಾಗಿದ್ದು, ಮೊಟ್ಟೆ ಪ್ರಿಯರಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ. ಕೋಳಿಗಳಿಗೆ ನೀಡುವ ಆಹಾರದ ಬೆಲೆ ಏರಿಕೆಯಾದ ಪರಿಣಾಮ ಸಹಜವಾಗಿಯೇ ಮೊಟ್ಟೆಗಳು ದುಬಾರಿ ಎನಿಸಿವೆ. 2021ರ ಜನವರಿಯಲ್ಲಿ 100 ಮೊಟ್ಟೆಗಳ ಒಂದು ಬ್ಯಾಚ್‌ಗೆ 437.06 ರೂಪಾಯಿ ನಿಗದಿಯಾಗಿತ್ತು. ಕಳೆದ ವರ್ಷ ಜನವರಿಯಲ್ಲಿ 100 ಮೊಟ್ಟೆಗಳ ಒಂದು ಬ್ಯಾಚ್‌ಗೆ 437.58 ರೂಪಾಯಿ ಇತ್ತು. ಆದರೆ ಈ ಬಾರಿ 100 ಮೊಟ್ಟೆಗಳ 1 ಬ್ಯಾಚ್‌ಗೆ ಬರೋಬ್ಬರಿ 575 ರೂಪಾಯಿ ಆಗಿದೆ.
ಕೋಳಿಗಳಿಗೆ ನೀಡುವ ಆಹಾರದ ಬೆಲೆ ಏರಿಕೆ ಆದ ಪರಿಣಾಮ ಮೊಟ್ಟೆಯ ಬೆಲೆ ಏರಿಕೆ ಆಗಿರುವುದರಿಂದ ಅತ್ತ ಮೊಟ್ಟೆಯಿಂದ ಮಾಡುವ ಖಾದ್ಯಗಳ ಬೆಲೆ ಏರಿಕೆಯಾಗುವ ಸಾಧ್ಯತೆ ಕೂಡ ಇದ್ದು, ಮೊಟ್ಟೆ ರೇಟ್ ಏರಿದ ಪರಿಣಾಮ ಗ್ರಾಹಕರಿಗೆ ನೇರವಾಗಿ ತಟ್ಟಲಿದೆ. ಸದ್ಯ ವ್ಯಾಪಾರಿಗಳಿಗೆ ಒಂದು ಮೊಟ್ಟೆಗೆ 5.75 ರೂಪಾಯಿಯಂತೆ ಹೋಲ್ ಸೇಲ್ ದರ ನಿಗದಿ ಪಡಿಸಲಾಗಿದ್ದು, ಗ್ರಾಹಕರಿಗೆ 7 ರೂಪಾಯಿಂದ 8 ರೂಪಾಯಿಗೆ ಮಾರಾಟ ಮಾಡಲು ಚಿಂತನೆ ನಡೆಸಲಾಗಿದೆ. ಸದ್ಯ ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಮೊಟ್ಟೆಯ ಬೆಲೆ ಏರಿಕೆ ಆಗಿದ್ದು, ಇದು ಇಲ್ಲಿಗೆ ಮಾತ್ರ ಸೀಮಿತವಾಗಿರದೆ ರಾಜ್ಯದ ಉದ್ದಗಲಕ್ಕೂ ವಿಸ್ತರಿಸುವ ಸಾಧ್ಯತೆ ಹೇರಳವಾಗಿದೆ. ರಾಜ್ಯದ ವಿವಿಧ ಭಾಗಗಳಲ್ಲಿ ಮೊಟ್ಟೆ ಬ್ಯುಸಿನೆಸ್ ಮಾಡ್ತಿರುವುದರಿಂದ ಒಂದು ಕಡೆ ಉತ್ಪನ್ನವಾದ ಮೊಟ್ಟೆ ರಾಜ್ಯದ ವಿವಿಧ ಜಿಲ್ಲೆಗಳಿಗೆ ರಫ್ತಾಗುತ್ತದೆ. ಹೀಗಾಗಿ ಸಹಜವಾಗಿಯೇ ಬೆಂಗಳೂರು ಮಾತ್ರವಲ್ಲದೇ ರಾಜ್ಯದೆಲ್ಲೆಡೆ ಮೊಟ್ಟೆ ಬೆಲೆ ಏರಿಕೆ ಆಗುವ ಸಾಧ್ಯತೆ ಇದೆ. ಇದರಿಂದ ಜನ ಸಾಮಾನ್ಯರು ಕೈ ಸುಟ್ಟುಕೊಳ್ಳೋದರಲ್ಲಿ ಯಾವುದೇ ಅನುಮಾನವಿಲ್ಲ.