ಮಡಿಕೇರಿ : ಚುನಾವಣೆ ಮುಗಿಯುವವರೆಗೂ ಕೊಡಗಿನ ಸಮಾರಂಭಗಳಲ್ಲಿ ಮದ್ಯ ಬಳಕೆ ಮಾಡಬಾರದು ಎಂದು ಚುನಾವಣಾ ಆಯೋಗವು ಆದೇಶ ಹೊರಡಿಸಿತ್ತು. ಈ ಹಿನ್ನೆಲೆ ಕೊಡಗಿನ ಜನರು ಮದ್ಯ ಬಳಕೆ ಮಾಡಲು ಅವಕಾಶ ಕಲ್ಪಿಸುವಂತೆ ಚುನಾವಣಾ ಆಯೋಗಕ್ಕೆ ಮನವಿ ಮಾಡಿದ್ದರು.
ಇದೀಗ ಮದ್ಯ ನಿಷೇಧ ನಿರ್ಬಂಧ ಸಡಿಲಿಸಿ ಖಾಸಗಿ ಸಮಾರಂಭಗಳಲ್ಲಿ ಮದ್ಯ ಬಳಕೆ ಮಾಡಲು ಅವಕಾಶ ನೀಡುವಂತೆ ರಾಜ್ಯದ ಎಲ್ಲಾ ಅಬಕಾರಿ ಇಲಾಖೆ ಅಧಿಕಾರಿಗಳಿಗೆ ರಾಜ್ಯ ಜಂಟಿ ಚುನಾವಣಾಧಿಕಾರಿ ಸೂಚನೆ ಕೊಟ್ಟಿದ್ದಾರೆ.
ಕೊಡಗಿನಲ್ಲಿ ಮದುವೆ, ನಾಮಕರಣ ಸೇರಿದಂತೆ ಸಮಾರಂಭಗಳಲ್ಲಿ ಮದ್ಯ ಸರಬರಾಜು ಮಾಡಲು ನಿರ್ಬಂಧ ಹೇರಿದ್ದ ಬಗ್ಗೆ ಚುನಾವಣಾಧಿಕಾರಿಗಳಿಗೆ ಕೊಡವ ಸಮಾಜ, ಗೌಡ ಸಮಾಜ ಸೇರಿದಂತೆ ವಿವಿಧ ಸಮಾಜಗಳಿಂದ ದೂರು ಸಲ್ಲಿಸಲಾಗಿತ್ತು. ಅಲ್ಲದೇ ಬಿಜೆಪಿಯಿಂದ ಕಿಲನ್ ಗಣಪತಿ ಎಲ್ಲಾ ಸಂಸ್ಥೆಗಳ ಪರವಾಗಿ ದೂರು ಸಲ್ಲಿಸಿದ್ದರು. ಈ ಹಿನ್ನೆಲೆ ನಿರ್ಬಂಧ ಸಡಿಲಿಸಿ ಅಧಿಕಾರಿಗಳು ಆದೇಶ ಹೊರಡಿಸಿದ್ದಾರೆ.
ರಾಜಕೀಯ ಪಕ್ಷಗಳಿಂದ ಅಥವಾ ರಾಜಕಾರಣಿಗಳಿಂದ ನಡೆಯುವ ಸಭೆ ಸಮಾರಂಭಗಳಲ್ಲಿ ಮದ್ಯ ಸರಬರಾಜು ಮಾಡಬಾರದು. ಉಳಿದಂತೆ ಚುನಾವಣಾ ನೀತಿ ಸಂಹಿತೆಗೆ ಅನುಗುಣವಾಗಿ ಎಂದಿನಂತೆ ಮದ್ಯ ಸರಬರಾಜಿಗೆ ಅನುಮತಿ ನೀಡಬಹುದು ಎಂದು ಚುನಾವಣಾ ಅಯೋಗವು ಆದೇಶ ಹೊರಡಿಸಿದೆ.