ಬೆಂಗಳೂರು : ಹೊಸ ವರ್ಷಾಚರಣೆಯ ಕ್ಷಣಗಣನೆ ಹಿನ್ನೆಲೆ. ಮುಂಜಾಗ್ರತಾ ಕ್ರಮವಾಗಿ ನಗರದ ಎಲ್ಲಾ ಫ್ಲೈಓವರ್ಗಳನ್ನು ಪೊಲೀಸ್ ಇಲಾಖೆ ಬಂದ್ ಮಾಡಿದೆ.
ಈ ನಡುವೆ ಎಲೆಕ್ಟ್ರಾನಿಕ್ ಸಿಟಿ ಎಲಿವೇಟೆಡ್ ಫ್ಲೈಓವರ್ ಬಂದ್ ಮಾಡಿದ ಕಾರಣ ಪೊಲೀಸರು ಮತ್ತು ವಾಹನ ಸವಾರರ ನಡುವೆ ವಾಗ್ವಾದ ನಡೆದಿದೆ.
ಈಗಾಗಲೇ ಪೊಲೀಸರು ಯಾವುದೇ ಅಹಿತಕರ ಘಟನೆ ನಡೆಯದಂತೆ ಮುನ್ನೆಚ್ಚರಿಕಾ ಕ್ರಮವಾಗಿ ನಗರದ ಎಲ್ಲಾ ಫ್ಲೈಓವರ್ಗಳನ್ನು ಬಂದ್ ಮಾಡಿದ್ದಾರೆ. ಅದೇ ರೀತಿ ಎಲೆಕ್ಟ್ರಾನಿಕ್ ಸಿಟಿಯಿಂದ ಸಿಲ್ಕ್ಬೋರ್ಡ್ ವರೆಗಿನ 9 ಕಿಲೋಮೀಟರ್ ದೂರದ ಫ್ಲೈಓವರ್ ಕೂಡ ಬಂದ್ ಮಾಡಲಾಗಿದೆ.
ಕುಡಿದು ಮೋಜು ಮಸ್ತಿ ಹಿನ್ನೆಲೆ. ರಾತ್ರಿ ವೇಳೆ ಕುಡಿದು ಅತಿವೇಗವಾಗಿ ವಾಹನ ಚಾಲನೆಯಿಂದ ಅಪಘಾತಗಳು ಸಂಭವಿಸುವ ಸಾಧ್ಯತೆಯಿಂದಾಗಿ ರಾತ್ರಿ 8 ಗಂಟೆಯಿಂದ ಬೆಳಗ್ಗೆ 5 ಗಂಟೆಯ ವರೆಗೆ ವಾಹನಗಳಿಗೆ ನಿರ್ಬಂಧ ವಿಧಿಸಲಾಗಿತ್ತು.
ಆದರೆ ಇದೀಗ ಎಲೆಕ್ಟ್ರಾನಿಕ್ ಸಿಟಿ ಫ್ಲೈಓವರ್ ಕ್ಲೋಸ್ ಮಾಡಿದ್ದಕ್ಕೆ ವಾಹನ ಸವಾರರು ಪೊಲೀಸರೊಂದಿಗೆ ವಾಗ್ವಾದಕ್ಕಿಳಿದಿದ್ದಾರೆ. ಯಾವುದೇ ಮಾಹಿತಿ ನೀಡದೆ ಕ್ಲೋಸ್ ಮಾಡಿದ್ದೀರಿ ಎಂದು ಟ್ರಾಫಿಕ್ ಪೊಲೀಸರೊಂದಿಗೆ ಜಟಾಪಟಿ ನಡೆಸಿದ್ದಾರೆ.