ಬೆಂಗಳೂರು: ಮಾಜಿ ಶಾಸಕ ನೆ.ಲ.ನರೇಂದ್ರ ಬಾಬು ಕಾಂಗ್ರೆಸ್ ತೊರೆದು ಬಿಜೆಪಿ ಪಕ್ಷ ಸೇರಲಿದ್ದಾರೆ ಎಂದು ತಿಳಿದು ಬಂದಿದೆ.
ಈ ಕುರಿತು ಖಾಸಗಿ ವಾಹಿನಿಯೊಂದು ವರದಿ ಮಾಡಿದೆ. ಕಾಂಗ್ರೆಸ್ ನಲ್ಲಿ ಇತ್ತೀಚೆಗಿನ ಬೆಳವಣಿಗೆಗಳಿಂದ ಬೇಸತ್ತಿರುವ ನರೇಂದ್ರಬಾಬು ಬಿಜೆಪಿ ಸೇರ್ಪಡೆಯಾಗಲು ನಿರ್ಧರಿಸಿದ್ದಾರೆ. ಇಂದು ಸಂಜೆ ರಾಜಾಜಿನಗರದಲ್ಲಿರುವ ತಮ್ಮ ಮನೆಯಲ್ಲಿ ಕಾರ್ಯಕರ್ತರೊಂದಿಗೆ ಅನೌಪಚಾರಿಕ ಸಭೆ ನಡೆಸಿ, ತಮ್ಮ ರಾಜಕೀಯ ನಡೆ ಬಗ್ಗೆ ಚರ್ಚೆ ನಡೆಸಲಿದ್ದಾರೆ. ನಂತರ ಅಧಿಕೃತವಾಗಿ ಘೋಷಣೆ ಮಾಡಲಿದ್ದಾರೆ.
10 ಕಾರಣಗಳನ್ನು ನೀಡಿ ಕಾಂಗ್ರೆಸ್ ಪಕ್ಷ ತೊರೆಯಲು ನಿರ್ಧರಿಸಿದ್ದಾರೆ. ಪಕ್ಷದಲ್ಲಿ ಒಳ ಒಪ್ಪಂದ ಹೆಚ್ಚುತ್ತಿದೆ. ಮಹಾಲಕ್ಷ್ಮಿ ಲೇಔಟ್ ಕ್ಷೇತ್ರದಲ್ಲಿ ಪಕ್ಷ ಜೆಡಿಎಸ್ ಜತೆ ಒಳ ಒಪ್ಪಂದ ಮಾಡಿಕೊಂಡು ಹೆಚ್ಚೆಚ್ಚು ಅನುದಾನ ನೀಡುತ್ತಿದೆ. ತಾವು ಶಾಸಕರಾಗಿದ್ದ ಸಮಯದಲ್ಲಿ ಯಾವುದೇ ಅನುದಾನ ನೀಡಿರಲಿಲ್ಲ. ಹೀಗೆ ಅನುದಾನ ನೀಡಿದ್ದರೆ, ನನ್ನ ಕ್ಷೇತ್ರವನ್ನು ಅಭಿವೃದ್ಧಿ ಮಾಡುತ್ತಿದ್ದೆ. ಇದಕ್ಕಿಂತ ಮೇಲಾಗಿ ಬಿಬಿಎಂಪಿಯಲ್ಲಿ ಸೋತ ವ್ಯಕ್ತಿಗೆ ಪಕ್ಷದಲ್ಲಿ ಉನ್ನತ ಸ್ಥಾನ ನೀಡಿದ್ದಾರೆ. ಈ ಮೂಲಕ ಪಕ್ಷದಲ್ಲಿ ತುಳಿಯಲು ಯತ್ನಿಸುತ್ತಿದ್ದಾರೆ. ಈ ಬಗ್ಗೆ ಕೆಪಿಸಿಸಿ ಅಧ್ಯಕ್ಷ ಪರಮೇಶ್ವರ್ ಗೆ ದೂರು ನೀಡಿದರು ಕ್ರಮಕೈಗೊಂಡಿಲ್ಲ. ಹೀಗಾಗಿ ಬೇಸತ್ತು ಪಕ್ಷ ತೊರೆಯುತ್ತಿರುವುದಾಗಿ ಹೇಳಿದ್ದಾರೆ. ಅಕ್ಟೋಬರ್ 1ರಂದು ನೆ.ಲ.ನರೇಂದ್ರ ಬಾಬು ಅಧಿಕೃತವಾಗಿ ಬಿಜೆಪಿಗೆ ಸೇರ್ಪಡೆಯಾಗಲಿದ್ದಾರೆ ಎಂದು ತಿಳಿದು ಬಂದಿದೆ.