ಯಮನೂರು ಲಾಠಿ ಚಾರ್ಚ್ ಕೇಸ್: ರೈತರೇನು ಭಯೋತ್ಪಾದಕರೆ, ಕೋಡಿಹಳ್ಳಿ ಚಂದ್ರಶೇಖರ್

ಸೋಮವಾರ, 1 ಆಗಸ್ಟ್ 2016 (16:16 IST)
ಧಾರವಾಡ ಜಿಲ್ಲೆ ನವಲಗುಂದ ತಾಲೂಕಿನ ಯಮನೂರು ಲಾಠಿ ಚಾರ್ಜ್ ಪ್ರಕರಣಕ್ಕೆ ಸಂಬಂಧಿಸಿದಂತೆ ಯಾವ ಆಧಾರದ ಮೇಲೆ ನೀವು ಲಾಠಿ ಚಾರ್ಜ್ ಮಾಡಿಸಿದ್ದೀರಿ. ಲಾಠಿ ಚಾರ್ಚ್ ಮಾಡಲು ರೈತರೇನು ಭಯೋತ್ಪಾದಕರೆ ಎಂದು ರೈತ ಸಂಘದ ಮುಖಂಡ ಕೋಡಿಹಳ್ಳಿ ಚಂದ್ರಶೇಖರ್ ಪ್ರಶ್ನಿಸಿದ್ದಾರೆ.
 
ಹುಬ್ಬಳ್ಳಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಯಾರ ಮಾರ್ಗದರ್ಶನದಲ್ಲಿ ಧಾರವಾಡ ಜಿಲ್ಲೆ ನವಲಗುಂದ ತಾಲೂಕಿನ ಯಮನೂರಿನಲ್ಲಿ ಲಾಠಿ ಚಾರ್ಚ್ ಮಾಡಿದ್ದಾರೆ ಎನ್ನುವುದು ಬಹಿರಂಗವಾಗಬೇಕು. ರಾಜ್ಯದಲ್ಲಿ ಇನ್ನು ಮುಂದೆ ಕಾಂಗ್ರೆಸ್ ಅಧಿಕಾರ ಪಡೆದುಕೊಳ್ಳಲು ಸಾಧ್ಯವಿಲ್ಲ. ಅದಕ್ಕೆ ರಾಜ್ಯ ಗೃಹ ಖಾತೆ ಸಚಿವ ಜಿ.ಪರಮೇಶ್ವರ್ ಅವರೇ ನೇರ ಹೊಣೆ ಎಂದು ಗುಡುಗಿದರು.
 
ಯಮನೂರು ಲಾಠಿ ಚಾರ್ಚ್ ಪ್ರಕರಣಕ್ಕೆ ಎಡಿಜಿಪಿ ಭಾಸ್ಕರ್ ರಾವ್ ಹಾಗೂ ಕಮಲಪಂತ್ ಅವರೇ ಮೂಲ ಕಾರಣ. ನೀವೆ ಅಪರಾಧಿಗಳು, ನಿಮ್ಮಿಂದಲೇ ತನಿಖೆ ನಡೆಯುವುದು ಯಾವ ನ್ಯಾಯ ಎಂದು ಪ್ರಶ್ನಿಸಿದರು.
 
ಮಹದಾಯಿ ನದಿ ನೀರು ಹಂಚಿಕೆ ವಿವಾದಕ್ಕೆ ಸಂಬಂಧಿಸಿದಂತೆ ರಾಜ್ಯದ ಎಲ್ಲ ಸಂಸದರು ರಾಜೀನಾಮೆ ನೀಡಬೇಕು. ಇಲ್ಲವಾದರೆ ಪ್ರಧಾನಿ ನರೇಂದ್ರ ಮೋದಿ ಅವರ ಮೇಲೆ ಒತ್ತಡ ತರಬೇಕು. ಮಹದಾಯಿ ವಿವಾದ ಕುರಿತಂತೆ ನ್ಯಾಯಾಂಗ ಹೋರಾಟ ಮುಂದುವರೆಯಲಿದೆ ಎಂದು ರೈತ ಸಂಘದ ಮುಖಂಡ ಕೋಡಿಹಳ್ಳಿ ಚಂದ್ರಶೇಖರ್ ತಿಳಿಸಿದ್ದಾರೆ.

ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ