ಹಾಸನದ ಮಲೆನಾಡು ಭಾಗದಲ್ಲಿ ಕಾಡಾನೆಗಳ ಉಪಟಳ ಮಿತಿಮೀರಿದೆ. ಇದಕ್ಕೆ ಶಾಶ್ವತ ಪರಿಹಾರ ಕಂಡುಹಿಡಿಯಲು ಸರ್ಕಾರ ವಿಫಲವಾಗಿದೆ. ಈ ಹಿನ್ನೆಲೆಯಲ್ಲಿ ಜನರೇ ಕಾಡಾನೆಗಳ ಕಾಟಕ್ಕೆ ಬ್ರೇಕ್ ಹಾಕಲು ಮುಂದಾಗಿದ್ದಾರೆ. ಸಕಲೇಶಪುರ ತಾಲೂಕಿನ ಹೊಸಕೊಪ್ಪಲು ಗ್ರಾಮದ ರೈತರು ಹಾಗೂ ಕಾಫಿ ಬೆಳೆಗಾರರು, 20 ಅಡಿ ಅಗಲ 20 ಅಡಿ ಆಳದ ಕಂದಕ ತೋಡಿದ್ದಾರೆ. ಕಂದಕ ತೋಡಿದರೆ ಆನೆ ದಾಳಿ ತಪ್ಪಿಸಬಹುದು ಅನ್ನೋದು ಈ ಗ್ರಾಮಸ್ಥರ ಲೆಕ್ಕಾಚಾರ. ಕಂದಕದ ಮೇಲೆ ಬಿದಿರು ಹಾಗೂ ಕಟ್ಟಿಗೆಗಳನ್ನು ಇಟ್ಟು ಅದರ ಮೇಲೆ ಪ್ಲಾಸ್ಟಿಕ್ ಚೀಲ ಹಾಕಿ, ಚೀಲದ ಮೇಲೆ ಸೊಪ್ಪು ಹಾಕಿ ಮುಚ್ಚಲಾಗಿದೆ. ಯಾವಾಗ ಬೇಕಾದರೂ ಕಾಡಾನೆಗಳು ಖೆಡ್ಡಾಗೆ ಬೀಳುವ ಸಾಧ್ಯತೆ ಇದೆ. ಹೊಸಕೊಪ್ಪಲು ಗ್ರಾಮದ ಅಮೃತ್ ಎಂಬುವವರ ಜಮೀನಿನಲ್ಲಿ ಗಜಪಡೆಗೆ ಖೆಡ್ಡಾ ಸಿದ್ದವಾಗಿದೆ. ಕಾಡಾನೆಗಳ ಕಾಟದಿಂದ ರೋಸಿ ಹೋದ ಜನರು ಈ ಪ್ಲ್ಯಾನ್ ಮಾಡಿದ್ದಾರೆ.ಕಾಡಾನೆಗಳು ಕಂದಕಕ್ಕೆ ಬಿದ್ದರೆ ಅದಕ್ಕೆ ಸರ್ಕಾರವೇ ಹೊಣೆ ಎಂದು ಗ್ರಾಮಸ್ಥರು ಹೇಳುತ್ತಿದ್ದಾರೆ.