ಕ್ರೂರ ಪ್ರಾಣಿಗಳ ಹೆಜ್ಜೆ ಗುರುತು ಪತ್ತೆ; ರೈತರಲ್ಲಿ ಚಿಂತೆ
ಮಂಗಳವಾರ, 26 ಜೂನ್ 2018 (18:50 IST)
ನಾಲ್ಕು ವನ್ಯಧಾಮಗಳಿಂದ ಕೂಡಿದ ಚಾಮರಾಜನಗರ ಜಿಲ್ಲೆಯಲ್ಲಿ ಶೇ.58 ರಷ್ಟು ಅರಣ್ಯ ಪ್ರದೇಶವಿರೋದ್ರಿಂದ ಮಾನವ ಮತ್ತು ವನ್ಯಪ್ರಾಣಿ ಸಂಘರ್ಷ ಆಗಾಗ್ಗೆ ನಡೆಯುತ್ತಲೇ ಇರುತ್ತದೆ. ಈ ನಡುವೆ ಹುಲಿ ಮತ್ತು ಚಿರತೆಗಳು ರೈತರ ಜಮೀನುಗಳ ಬಳಿಗೆ ಬರಲು ಶುರು ಮಾಡಿರೋದ್ರಿಂದ ರೈತರಲ್ಲಿ ಭೀತಿ ಇದೆ.
ಚಾಮರಾಜನಗರ ತಾಲೂಕಿನ ಹೆಗ್ಗೋಠಾರ ಮತ್ತು ಮುತ್ತಿಗೆ ಗ್ರಾಮದ ಸುತ್ತಮುತ್ತಲ ಭಾಗದಲ್ಲಿ ಹುಲಿ ಹಾಗೂ ಚಿರತೆಗಳು ಪ್ರತ್ಯಕ್ಷವಾಗ್ತಿವೆ. ಕೆಲವು ರೈತರು ಹುಲಿ ಮತ್ತು ಚಿರತೆಯನ್ನು ಖುದ್ದು ನೋಡಿದವರಿದ್ದಾರೆ. ಇನ್ನು ಜಮೀನುಗಳ ಬಳಿಯಂತೂ ಈ ಎರಡು ಕ್ರೂರ ಪ್ರಾಣಿಗಳ ಹೆಜ್ಜೆ ಗುರುತು ಪತ್ತೆಯಾಗಿದೆ. ಇದರಿಂದಾಗಿ ದಿನನಿತ್ಯ ಜಮೀನು ಬಳಿ ಹೋಗಲು ರೈತರು ಹೆದರುತ್ತಿದ್ದು, ಜಾನುವಾರುಗಳನ್ನು ಮೇಯಿಸಲು ಸಹ ಹಿಂಜರಿಯುತ್ತಿದ್ದಾರೆ. ಜಮೀನುಗಳ ಬಳಿ ಇರುವ ಹಂದಿಗಳನ್ನು ತಿನ್ನುವ ಸಲುವಾಗಿ ಹುಲಿ, ಚಿರತೆಗಳು ಬರುತ್ತಿವೆ ಎನ್ನಲಾಗುತ್ತಿದೆ.
ಇನ್ನು ಈ ವಿಚಾರವಾಗಿ ಚಾಮರಾಜನಗರ ಪ್ರಾದೇಶಿಕ ಅರಣ್ಯಾಧಿಕಾರಿಗಳಿಗೆ ಮಾಹಿತಿ ನೀಡಲಾಗಿದೆ. ಅವ್ರು ರೈತರು ಹೇಳಿದ ಜಾಗವನ್ನು ಬಿಟ್ಟು ಬೇರೆಲ್ಲೋ ಹುಲಿ, ಚಿರತೆಗೆ ಬೋನು ಇಟ್ಟಿದ್ದಾರೆ ಎಂಬ ಆರೋಪ ರೈತರದು. ಇದನ್ನು ಅಲ್ಲಗಳೆಯುವ ಅರಣ್ಯಾಧಿಕಾರಿಗಳು, ಪ್ರಾಣಿಗಳ ಹೆಜ್ಜೆ ಗುರುತುಗಳು ಕಂಡುಬಂದಿದೆ. ಅವುಗಳನ್ನು ಸೆರೆ ಹಿಡಿಯಲು ಅಗತ್ಯವಾದ ಬೋನು ಇಡಲಾಗಿದೆ. ಪ್ರಾಣಿಗಳ ಚಲನವಲನ ಗಮನಿಸಿಯೇ ನಾವು ಸೂಕ್ತ ಸ್ಥಳದಲ್ಲಿ ಬೋನು ಇಟ್ಟಿದ್ದೇವೆ ಎನ್ನುತ್ತಿದ್ದಾರೆ.
ಗ್ರಾಮದ ಹೊರವಲಯದಲ್ಲಿರುವ ಜಮೀನುಗಳಿಗೆ ಬಂದಿರುವ ಪ್ರಾಣಿಗಳು, ಊರಿನೊಳಗೆ ನುಗ್ಗಿ ಜನರಿಗೆ ತೊಂದ್ರೆ ಕೊಟ್ಟರೆ ಏನು ಮಾಡೋದು ಅನ್ನೋ ಚಿಂತೆ ಗ್ರಾಮಸ್ಥರನ್ನು ಕಾಡ್ತಿದೆ. ಅರಣ್ಯ ಇಲಾಖೆ ಆದಷ್ಟು ಬೇಗ ಜಮೀನು ಬಳಿ ಕಾಣಿಸಿಕೊಳ್ಳುತ್ತಿರುವ ಹುಲಿ, ಚಿರತೆಗಳನ್ನು ಸೆರೆ ಹಿಡಿಯುತ್ತದೆಯೇ ಎಂಬುದನ್ನು ಕಾದು ನೋಡ್ಬೇಕಿದೆ.