ಪಟಾಕಿ ನಿಷೇಧ ವಿವಾದ – ಸುಪ್ರೀಂ ಕೋರ್ಟ್ ಸ್ಪಷ್ಟನೆ

ಶನಿವಾರ, 30 ಅಕ್ಟೋಬರ್ 2021 (21:22 IST)
ದೀಪಾವಳಿ ಸಮಯದಲ್ಲಿ ಪಟಾಕಿ ನಿಷೇಧಿಸಿ ಸುಪ್ರೀಂಕೋರ್ಟ್ ಆದೇಶ ಹೊರಡಿಸಿತ್ತು. ಈ ಆದೇಶವನ್ನು ದೆಹಲಿ ಸೇರಿದಂತೆ 4 ರಾಜ್ಯಗಳು ಜಾರಿಗೆ ತಂದಿವೆ. ಇನ್ನೂ ಅನೇಕ ರಾಜ್ಯಗಳು ಈ ಬಗ್ಗೆ ಪರಿಶೀಲನೆ ನಡೆಸುತ್ತಿವೆ. ಆದರೆ ಈ ಬಗ್ಗೆ ಕೆಲವರು ಆಕ್ಷೇಪಗಳು ವ್ಯಕ್ತಪಡಿಸಿದ್ದರು. ಪಟಾಕಿ ನಿಷೇಧವು ಹಿಂದೂ ಧರ್ಮದ ವಿರೋಧಿಯಾಗಿದೆ. ಹಬ್ಬದ ವಿಚಾರದಲ್ಲಿ ಈ ರೀತಿ ಮಾಡಬಾರದು ಎಂದು ವಾದಿಸಿದ್ದರು. ಆದರೆ ಸುಪ್ರೀಂಕೋರ್ಟ್ ಈ ಬಗ್ಗೆ ಸ್ಪಷ್ಟನೆ ನೀಡಿದೆ.
ನ್ಯಾಯಮೂರ್ತಿಗಳಾದ ಎಂ.ಆರ್.ಶಾ ಮತ್ತು ಎ.ಎಸ್.ಬೋಪಣ್ಣ ದ್ವಿಸದಸದ್ಯ ಪೀಠವು, ನಾವು ಯಾವುದೋ ಒಂದು ಸಮುದಾಯದ ವಿರುದ್ಧ ಇಲ್ಲ. ಬದಲಿಗೆ ಜನರ ಜೀವಿಸುವ ಮತ್ತು ಆರೋಗ್ಯದ ಹಕ್ಕಿನ ರಕ್ಷಣೆಗಾಗಿ ಇದ್ದೇವೆ ಎಂಬ ಸಂದೇಶವನ್ನು ರವಾನಿಸಬೇಕಿದೆ. ಪಟಾಕಿ ತಯಾರಕರು ಮನೋರಂಜನೆಯ ನೆಪದಲ್ಲಿ ದೇಶದ ನಾಗರಿಕರ ಜೀವದ ಜತೆ ಆಟವಾಡುವಂತಿಲ್ಲ ಎಂದು ಹೇಳಿದೆ. ಹಾಗೆ ಪಟಾಕಿಗೆ ನಿಷೇಧ ಹೇರಿದ್ದರೂ, ಇಂದಿಗೂ ಪಟಾಕಿಗಳು ಮಾರುಕಟ್ಟೆಯಲ್ಲಿ ಮಾರಾಟವಾಗುತ್ತಿವೆ. ಆದರೆ ನಿಷೇಧದ ಆದೇಶದ ಪ್ರಕಾರ ಕೇವಲ ಹಸಿರು ಪಟಾಕಿಗಳಷ್ಟೇ ಮಾರಾಟವಾಗಬೇಕು. ಅದೂ ಸಹ ಪರವಾನಗಿ ಪಡೆದ ಮಾರಾಟಗಾರರ ಮೂಲಕ ಮಾತ್ರ. ಜತೆಗೆ ಆನ್ಲೈನ್ ಮೂಲಕವೂ ಪಟಾಕಿ ಮಾರಾಟವನ್ನು ನಿಷೇಧಿಸಲಾಗಿದೆ. ಈ ನಿಷೇಧವನ್ನು ಜಾರಿಗೆ ತರಬೇಕಾದ ಪ್ರಾಧಿಕಾರಗಳು ಆದೇಶವನ್ನು ಯಥಾವತ್ತಾಗಿ ಮತ್ತು ಪೂರ್ಣಪ್ರಮಾಣದಲ್ಲಿ ಜಾರಿಗೆ ತರಬೇಕು ಎಂದು ಹೇಳಿದೆ.
ಇನ್ನು ವಿವರವಾದ ಕಾರಣವನ್ನು ನೀಡಿ ಈ ಹಿಂದೆ ಪಟಾಕಿ ನಿಷೇಧ ಆದೇಶವನ್ನು ಹೊರಡಿಸಲಾಗಿತ್ತು. ಆದರೆ ಎಲ್ಲಾ ಪಟಾಕಿಗಳನ್ನು ನಾವು ನಿಷೇಧ ಮಾಡಿಲ್ಲ. ನಾವು ಸಮಾಜದ ಹಿತದೃಷ್ಟಿಯಿಂದ ಈ ಪಟಾಕಿ ನಿಷೇಧವನ್ನು ಮಾಡಿದ್ದರೂ ಒಂದು ನಿರ್ದಿಷ್ಟವಾದ ಅನಿಸಿಕೆಯನ್ನು ಸೃಷ್ಟಿ ಮಾಡಲಾಗುತ್ತಿದೆ. ಆದರೆ, ಸುಪ್ರೀಂ ಕೋರ್ಟ್ ಪಟಾಕಿಯನ್ನು ಒಂದು ನಿರ್ದಿಷ್ಟ ಕಾರಣದಿಂದಲೇ ನಿಷೇಧ ಮಾಡಿದೆ ಎಂದು ಬಿಂಬಿಸಬಾರದು. ನಾವು ನಾಗರಿಕರ ಮೂಲಭೂತ ಹಕ್ಕುಗಳಿಗೆ ಅಡ್ಡಿ ಮಾಡಲು ಸಾಧ್ಯವಿಲ್ಲ ಎಂದು ಸುಪ್ರೀಂ ಕೋರ್ಟ್ ನ್ಯಾಯಪೀಠವು ಸ್ಪಷ್ಟನೆ ನೀಡಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ