ಪೌರ ಕಾರ್ಮಿಕರಿಗೆ ವಿದೇಶ ಪ್ರವಾಸ: ಆಂಜನೇಯ

ಬುಧವಾರ, 11 ಜನವರಿ 2017 (12:19 IST)
ಪೌರ ಕಾರ್ಮಿಕರಿಗೆ ಮನೆಕಟ್ಟಿಕೊಳ್ಳಲು ರೂ.7.5 ಲಕ್ಷ ನೆರವು, ಸಂಬಳದಲ್ಲಿ ಹೆಚ್ಚಳ, ಅವರ ಮಕ್ಕಳಿಗೆ ವಸತಿ ಶಾಲೆಗಳಲ್ಲಿ ಶೇ. 10 ರಷ್ಟು ಮೀಸಲಾತಿ, ವಿದೇಶಿ ಪ್ರವಾಸ, ಊಟದ ವ್ಯವಸ್ಥೆ ಹೀಗೆ ಅವರಿಗೆ ಅನೇಕ ಸವಲತ್ತುಗಳನ್ನು ನೀಡಲಾಗಿದೆ ಎಂದು ಸಮಾಜ ಕಲ್ಯಾಣ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಸಚಿವರಾದ ಹೆಚ್. ಆಂಜನೇಯ ತಿಳಿಸಿದ್ದಾರೆ.
 
ವಿಕಾಸ ಸೌಧದಲ್ಲಿ ಸಫಾಯಿ ಕರ್ಮಚಾರಿಗಳು ಮತ್ತು ಮ್ಯಾನುಯಲ್ ಸ್ಕ್ಯಾವೆಂಜರ್ಗಳ ಸಬಲೀಕರಣ ಕುರಿತು ಸಮಾಜ ಕಲ್ಯಾಣ ಇಲಾಖೆ ಹಾಗೂ ಕರ್ನಾಟಕ ರಾಜ್ಯ ಸಫಾಯಿ ಕರ್ಮಚಾರಿಗಳ ಆಯೋಗ ಹಮ್ಮಿಕೊಳ್ಳಲಾಗಿದ್ದ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.
 
ರೂ.200 ಕೋಟಿ ಮೀಸಲು: ಪೌರಕಾರ್ಮಿಕರು ಮಾಡುವುದು ಶ್ರೇಷ್ಠ ಕಾರ್ಯ ಅವರ ದುಡಿಮೆಯಿಂದಲೇ ಸ್ವಚ್ಛ ಭಾರತ ನಿರ್ಮಾಣವಾಗುತ್ತದೆ. ಮೈಸೂರಿಗೆ ಸ್ವಚ್ಛ ಭಾರತ್ ಪ್ರಶಸ್ತಿ ಬಂದಿರುವುದು ಈ ಪೌರಕಾರ್ಮಿಕರಿಂದಲೇ, ಪೌರಕಾರ್ಮಿಕರು ಹಿಂದಿನಿಂದಲೂ ತುಳಿತಕ್ಕೆ ಒಳಗಾಗುತ್ತಿದ್ದಾರೆ. ಈ ನಿಟ್ಟಿನಲ್ಲಿ ಸರ್ಕಾರ ಅವರಿಗೆ ಹತ್ತು ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ಅವರ ಸಂಬಳವನ್ನು ಹೆಚ್ಚಿಸಿದ್ದು ಅದನ್ನು ನೇರವಾಗಿ ಅವರ ಖಾತೆಗೆ ಜಮಾ ಮಾಡಲಾಗುತ್ತದೆ. 
 
ಜಿಲ್ಲಾ ಮಟ್ಟದಲ್ಲಿ ಪೌರ ಕಾರ್ಮಿಕ ಮಂಡಳಿಯನ್ನು ಸ್ಥಾಪಿಸಲಾಗಿದೆ. ಈ ಬಾರಿ ಪರಿಶಿಷ್ಟ ಜಾತಿ, ಬುಡಕಟ್ಟು ಯೋಜನೆಗೆ ಸರ್ಕಾರ 200 ಕೋಟಿ ಮೀಸಲಿಟ್ಟಿದ್ದು, ಅದನ್ನು ಈ ವರ್ಗದವರ ಕ್ಷೇಮಾಭಿವೃದ್ಧಿಗೆ ಬಳಸಲಾಗುತ್ತಿದೆ. ಜಿಲ್ಲೆಗಳಲ್ಲಿ ಈ ವರ್ಗದವರಿಗೆ ಸ್ಮಶಾನ ನಿರ್ಮಾಣಕ್ಕೆ ಒತ್ತು ನೀಡಲಾಗುತ್ತಿದೆ. ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಬಹುಮಾನ, ವಿದೇಶಿ ಓದಿಗೆ ಸಹಾಯಹಸ್ತ ಲಭಿಸುತ್ತಿವೆ. ಈ ಸರ್ಕಾರ ಬಂದ ನಂತರ ಪೌರಕಾರ್ಮಿಕರಿಗೆ ಬೆಳಗಿನ ಉಪಹಾರ ಅಥವಾ 20 ರೂ. ಹಣ ಸಿಗುತ್ತಿದೆ ಎಂದರು.
 
ಚಿಕಿತ್ಸೆಗೆ ಹಣ : ಪೌರಕಾರ್ಮಿಕರಿಗೆ ಉದ್ಯೋಗ ಭದ್ರತೆ ಒದಗಿಸಬೇಕು ಅವರನ್ನು ಯಾರೂ ಶೋಷಿಸಬಾರದು. ಗುಂಡಿಗಳ ಸ್ವಚ್ಚ ಕಾರ್ಯಗಳನ್ನು ಆಧುನಿಕ ಉಪಕರಣ ಬಳಸಿ ಮಾಡಬೇಕು. ಅಲ್ಲದೆ ಪೌರಕಾರ್ಮಿಕರ ಚಿಕಿತ್ಸೆಗಾಗಿ ಸಹ ಹಣ ನೀಡಲಾಗುವುದು. ಪೌರಕಾರ್ಮಿಕರ ಮಕ್ಕಳು ಸಹ ಶಿಕ್ಷಿತರಾಗಬೇಕು. ಜಿಲ್ಲಾ ತಾಲ್ಲೂಕು ಮಟ್ಟದಲ್ಲಿ ಪೌರಕಾರ್ಮಿಕರ ಕಾರ್ಯಕ್ರಮಗಳ ಬಗ್ಗೆ ಅರಿವು ಮೂಡಿಸಬೇಕು ಎಂದರು.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ