ಮಾಜಿ ಮುಖ್ಯಮಂತ್ರಿ ಗುಂಡೂರಾವ್ ಹೃದಯ ಶ್ರೀಮಂತಿಕೆ ಹೊಗಳಿದ- ಡಿ.ಕೆ ಶಿವಕುಮಾರ್
ಭಾನುವಾರ, 26 ಸೆಪ್ಟಂಬರ್ 2021 (17:27 IST)
ಮಾಜಿ ಮುಖ್ಯಮಂತ್ರಿ ದಿ. ಆರ್. ಗುಂಡೂರಾವ್ ಅವರು ಹೃದಯ ಶ್ರೀಮಂತಿಕೆ ಹೊಂದಿದ್ದರು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದರು.
ಭಾನುವಾರ ಆರ್. ಗುಂಡೂರಾವ್ ಫೌಂಡೇಶನ್ ಏರ್ಪಡಿಸಿದ್ದ ಗುಂಡೂರಾವ್ ಅವರ 84 ನೇ ಜನ್ಮದಿನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು,
ಯುವ ಕಾಂಗ್ರೆಸ್ ನ ರಾಜ್ಯ ಘಟಕದ ಅಧ್ಯಕ್ಷರಾಗಿ ಗುಂಡೂರಾವ್ ಅವರು ರಾಜ್ಯದಲ್ಲಿ ಸಂಘಟನೆ ಮಾಡಿದರು. 72 ರಲ್ಲಿ ವಿಧಾನಸಭೆಗೆ ಪ್ರವೇಶ ಮಾಡಿ, ಪಕ್ಷದ ನೀತಿ ನಿರ್ಧಾರಗಳನ್ನು ಪಾಲಿಸಿ ಮುಖ್ಯಮಂತ್ರಿ ಸ್ಥಾನಕ್ಕೇರಿದ್ದರು. ಹಲವು ಜನರಪರ ಕಾರ್ಯಗಳಿಂದ ಜನರ ಮನಸ್ಸಿನಲ್ಲಿ ಉಳಿದ್ದಾರೆ ಎಂದರು.
ಇಂದಿರಾಗಾಂಧಿ ಕಾಲದಿಂದ ಹಿಡಿದು ರಾಜೀವ್ ಗಾಂಧಿ ಕಾಲದವರೆಗೂ ಜನಸೇವೆ ಮಾಡಿದ್ದಾರೆ. ಕಿಮ್ಸ್ ಕಾಲೇಜು ಆರಂಭವಾಗಿರುವುದಕ್ಕೆ ಗುಂಡೂರಾವ್ ಅವರೇ ಕಾರಣೀಕರ್ತರು. ಇಂದಿರಾಗಾಂಧಿ ಅವರಿಗೆ ಬಹಳ ಪ್ರೀತಿ ಪಾತ್ರರಾಗಿದ್ದರು.
ವಿದ್ಯಾರ್ಥಿ ಘಟಕ ಹಾಗೂ ಯುವ ಕಾಂಗ್ರೆಸ್ ಅನ್ನು ನನ್ನ ಕಣ್ಣುಗಳು ಎನ್ನುತ್ತಿದ್ದರು. ಪಕ್ಷದ ಕಾರ್ಯಕರ್ತರಿಗೆ ಪ್ರೋತ್ಸಾಹ ನೀಡುವ ಮೂಲಕ ಪಕ್ಷದ ಸಾಧನೆ ಹಾಗೂ ಕೆಲಸವನ್ನು ಪ್ರಚಾರ ಮಾಡುತ್ತಿದ್ದರು.
ಜಾತ್ಯಾತೀತವಾಗಿ ಅಭಿವೃದ್ಧಿ ಕಾರ್ಯ:
ಯಾವುದೇ ಜಾತಿ, ಧರ್ಮ ನೋಡದೇ ಜಾತ್ಯಾತೀತ ವಾಗಿ ಅಭಿವೃದ್ಧಿ ಕಾರ್ಯಗಳನ್ನು ದಿನೇಶ್ ಗುಂಡೂರಾವ್ ಮಾಡಿಕೊಂಡು ಬರುತ್ತಿದ್ದಾರೆ. ಬೆಂಗಳೂರು ನಗರದಲ್ಲಿ ಪಕ್ಷದ ಸಂಘಟನೆ ಮಾಡುವ ಮೂಲಕ ಹೆಚ್ಚಿನ ಸ್ಥಾನ ಬರಲು ಕಾರಣೀಕರ್ತರಾಗಿದ್ದಾರೆ.
ಆಶ್ವಾಸನೆಗೆ ಮಾತ್ರ ಸೀಮಿತವಾದ ಬಿಜೆಪಿ:
ಬಿಜೆಪಿ ಸರ್ಕಾರ ಆಶ್ವಾಸನೆಗೆ ಮಾತ್ರ ಸೀಮಿತವಾಗಿದೆ. ಅಸಂಘಟಿತ ಕಾರ್ಮಿಕರಿಗೆ ಪರಿಹಾರ ಧನ ನೀಡಿಲ್ಲ. ಕಾಂಗ್ರೆಸ್ ಕಾರ್ಯಕರ್ತರು ಅಸಂಘಟಿತ ಕಾರ್ಮಿಕರನ್ನು ಗುರುತಿಸಿ ಗುರುತಿನ ಚೀಟಿ ಮಾಡಿಸಿಕೊಡಬೇಕು. ಒಂದು ಕ್ಷೇತ್ರದಲ್ಲಿ ಸುಮಾರು 50 ಸಾವಿರ ಗುರುತಿನ ಚೀಟಿ ಮಾಡಿಸಬೇಕು ಎಂದರು.
ಇದೇ ಸಂದರ್ಭದಲ್ಲಿ ನೂರಾರು ಜನರಿಗೆ ಬೇಳೆ, ಅಕ್ಕಿ, ಎಣ್ಣೆ ಸೇರಿ ಆಹಾರ ಪದಾರ್ಥಗಳು ಇರುವ 20 ಕೆಜಿ ಆಹಾರ ಕಿಟ್ ಅನ್ನು ವಿತರಿಸಲಾಯಿತು.
ಈ ಸಂದರ್ಭದಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಮಾಜಿ ಸಚಿವ ಹಾಗೂ ಶಾಸಕ ದಿನೇಶ್ ಗುಂಡೂರಾವ್, ಪಾಲಿಕೆ ಮಾಜಿ ಮೇಯರ್ ಪದ್ಮಾವತಿ ಸೇರಿ ಮತ್ತಿತರರಿದ್ದರು.