ಪ್ರವಾಸಿ ಬಸ್ವೊಂದಕ್ಕೆ ಬೆಂಕಿ ತಗುಲಿದ ಪರಿಣಾಮ 12 ಮಕ್ಕಳು ಸೇರಿ 45 ಮಂದಿ ದುರ್ಮರಣಕ್ಕೀಡಾದ ಘಟನೆ ಬಲ್ಗೇರಿಯಾ ಪ್ರದೇಶದ ಪಶ್ಚಿಮದಲ್ಲಿರುವ ಹೆದ್ದಾರಿಯಲ್ಲಿ ನಡೆದಿದೆ.
ಈ ಬಸ್ನಲ್ಲಿದ್ದವರೆಲ್ಲ ಉತ್ತರ ಮೆಸೆಡೋನಿಯನ್ ಪ್ರವಾಸಿಗರೇ ಆಗಿದ್ದರು ಎಂದು ವರದಿಯಾಗಿದೆ. ಬಲ್ಕನ್ ದೇಶಗಳ ಇತಿಹಾಸದಲ್ಲಿಯೇ ಇದು ಭಯಂಕರವಾದ ಅಪಘಾತ ಎಂದೂ ಹೇಳಲಾಗಿದೆ. ಇನ್ನು ಗಾಯಗೊಂಡ ಏಳುಮಂದಿಯನ್ನು ಸೋಫಿಯಾ ಆಸ್ಪತ್ರೆಗೆ ದಾಖಲಿಸಲಾಗಿದೆ.
ಆಂತರಿಕ ಸಚಿವಾಲಯದ ಸಚಿವ ಬಾಯ್ಕೊ ರಾಶ್ಕೋವ್ ಘಟನೆಯ ಬಗ್ಗೆ ಮಾಹಿತಿ ನೀಡಿದ್ದು, ಪ್ರಯಾಣಿಕರು ಬಸ್ನೊಳಗೆ ಗುಂಪುಗುಂಪಾಗಿ ಸುಟ್ಟು ಬೂದಿಯಾಗಿದ್ದಾರೆ ಎಂದಿದ್ದಾರೆ. ವೈರಲ್ ಆದ ವಿಡಿಯೋಗಳು ನೋಡಲು ಸಾಧ್ಯವಿಲ್ಲದಷ್ಟು ಭಯಾನಕವಾಗಿವೆ. ಇಂಥ ಸನ್ನಿವೇಶವನ್ನು ನಾನು ಮೊದಲೆಂದೂ ನೋಡಿಯೇ ಇರಲಿಲ್ಲ ಎಂದೂ ತಿಳಿಸಿದ್ದಾರೆ. ಅಪಘಾತಕ್ಕೆ ನಿಖರವಾದ ಕಾರಣ ತಿಳಿದುಬಂದಿಲ್ಲ. ಆದರೆ ಬಸ್ ಹೆದ್ದಾರಿಯ ಬ್ಯಾರಿಯರ್ (ಬೇಲಿ)ಗೆ ಡಿಕ್ಕಿ ಹೊಡೆದು ನಿಂತಿದೆ. ಬೆಂಕಿ ಹೊತ್ತಿ ಉರಿಯಲು ಪ್ರಾರಂಭವಾದ ಬಳಿಕ ಹೀಗಾಯಿತೋ, ಅಥವಾ ಡಿಕ್ಕಿಯ ರಭಸಕ್ಕೆ ಬೆಂಕಿ ಹೊತ್ತಿಕೊಂಡಿತೋ ಎಂಬುದು ಇನ್ನೂ ಅಸ್ಪಷ್ಟವಾಗಿಯೇ ಇದೆ.