ಗಣಪತಿ ಆತ್ಮಹತ್ಯೆ ಪ್ರಕರಣ: ಸಿಐಡಿ ಅಧಿಕಾರಿಗಳಿಂದ ಪ್ರೊನಬ್, ಪ್ರಸಾದ್ ವಿಚಾರಣೆ

ಶನಿವಾರ, 27 ಆಗಸ್ಟ್ 2016 (15:45 IST)
ಡಿವೈಎಸ್‌ಪಿ ಎಂ.ಕೆ.ಗಣಪತಿ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಐಡಿ ಅಧಿಕಾರಿಗಳು ಆರೋಪಿತ ಐಪಿಎಸ್ ಅಧಿಕಾರಿ ಪ್ರೊನಬ್ ಮೊಹಾಂತಿ ಅವರನ್ನು ವಿಚಾರಣೆಗೆ ಒಳಪಡಿಸಿದ್ದಾರೆ.
ಸಿಐಡಿ ಎಡಿಜಿಪಿ ಪ್ರತಾಪ್ ರೆಡ್ಡಿ ನೇತೃತ್ವದ ತಂಡ ಬೆಂಗಳೂರಿನ ಚಾಲುಕ್ಯ ವೃತ್ತದ ಬಳಿಯ ಸಿಐಡಿ ಕಚೇರಿಯಲ್ಲಿ ಆರೋಪಿತ ಐಪಿಎಸ್ ಅಧಿಕಾರಿ ಪ್ರೊನಬ್ ಮೊಹಾಂತಿ ಅವರ ವಿಚಾರಣೆ ನಡೆಸಿದ್ದಾರೆ.
 
ಮಂಗಳೂರು ಡಿವೈಎಸ್‌ಪಿ ಎಂ.ಕೆ.ಗಣಪತಿ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಐಡಿ ಅಧಿಕಾರಿಗಳು ನಿನ್ನೆ ಮಾಜಿ ಗೃಹ ಸಚಿವ ಕೆ.ಜೆ.ಜಾರ್ಜ್ ಅವರನ್ನು 4 ಗಂಟೆಗಳ ಕಾಲ ವಿಚಾರಣೆ ನಡೆಸಿದ್ದರು. ಪ್ರಕರಣದ ಮತ್ತೊಬ್ಬ ಆರೋಪಿತ ಅಧಿಕಾರಿ ಎಂ.ಎಂ.ಪ್ರಸಾದ್ ಅವರನ್ನು ಸಹ ಇಂದು ಮಧ್ಯಾಹ್ನ ವಿಚಾರಣೆಗೆ ಒಳಪಡಿಸಲಾಗುತ್ತದೆ ಎಂದು ಹೇಳಲಾಗುತ್ತಿದೆ. 
 
ಡಿವೈಎಸ್‌ಪಿ ಎಂ.ಕೆ.ಗಣಪತಿ ಆತ್ಮಹತ್ಯೆಗೆ ಶರಣಾಗುವ ಮುನ್ನ ಖಾಸಗಿ ಸುದ್ದಿ ವಾಹಿನಿಗೆ ಸಂದರ್ಶನ ನೀಡಿ ಮಾಜಿ ಗೃಹ ಸಚಿವ ಕೆ.ಜೆ.ಜಾರ್ಜ್ ಸೇರಿದಂತೆ ಪ್ರೊನಬ್ ಮೊಹಾಂತಿ ಮತ್ತು ಎಂ.ಎಂ.ಪ್ರಸಾದ್ ಅವರು ತನಗೆ ಕಿರುಕುಳ ನೀಡುತ್ತಿದ್ದಾರೆ. ನನಗೇನಾದ್ರೂ ಆದ್ರೆ ಈ ಮೂವರೇ ಕಾರಣ ಎಂದು ಆರೋಪಿಸಿದ್ದರು.
 
ಎಂ.ಕೆ.ಗಣಪತಿ ಅವರ ಪುತ್ರ ನೇಹಾಲ್ ಮಡಿಕೇರಿ ಹೆಚ್ಚುವರಿ ಜೆಎಂಎಫ್‌ಸಿ ನ್ಯಾಯಾಲಯಕ್ಕೆ ಖಾಸಗಿ ದೂರನ್ನು ನೀಡಿದ್ದರು. ಈ ಹಿನ್ನೆಲೆಯಲ್ಲಿ ಮಡಿಕೇರಿ ಹೆಚ್ಚುವರಿ ಜೆಎಂಎಫ್‌ಸಿ ನ್ಯಾಯಾಲಯದ ನ್ಯಾಯಾಧೀಶರಾದ ಅನ್ನಪೂರ್ಣೆಶ್ವರಿಯವರು ಮಾಜಿ ಗೃಹ ಸಚಿವ ಕೆ.ಜೆ.ಜಾರ್ಜ್ ಸೇರಿದಂತೆ ಪ್ರೊನಬ್ ಮೊಹಾಂತಿ ಮತ್ತು ಎಂ.ಎಂ.ಪ್ರಸಾದ್ ಎಫ್‌ಐಆರ್ ದಾಖಲಿಸುವಂತೆ ಮಡಿಕೇರಿ ಟೌನ್ ಪೊಲೀಸರಿಗೆ ಸೂಚನೆ ನೀಡಿದ್ದರು.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆಪ್ ಡೌನ್‍ಲೋಡ್ ಮಾಡಿಕೊಳ್ಳಿ 

ವೆಬ್ದುನಿಯಾವನ್ನು ಓದಿ