ಮಹಾನಗರ ಪಾಲಿಕೆಯಲ್ಲಿ ನಡೆಯುತ್ತಿರುವ ಗೋಲ್ ಮಾಲ್ ವಿರುದ್ಧ ಸಚಿವರು ತನಿಖೆಗೆ ಆದೇಶಿಸಿದ್ದಾರೆ.
ಕಲಬುರಗಿ ಮಹಾನಗರ ಪಾಲಿಕೆಯಲ್ಲಿ ಕೆಲ ವಾರ್ಡ್‍ಗಳಿಗೆ ಅಗತ್ಯವಿರುವಷ್ಟು ಪೌರಕಾರ್ಮಿಕರ ನಿಯೋಜಿಸದೆ ಅವ್ಯವಹಾರ ನಡೆಸಲಾಗಿದೆ ಎಂಬ ಆರೋಪಗಳ ಹಿನ್ನೆಲೆಯಲ್ಲಿ ತನಿಖೆ ನಡೆಸುವಂತೆ ಜಿಲ್ಲಾಧಿಕಾರಿಗಳಿಗೆ ನಗರಾಭಿವೃದ್ಧಿ ಸಚಿವ ಬಿ.ಎ. ಬಸವರಾಜ್ ಸೂಚಿಸಿದ್ದಾರೆ.
ಕುಲಂಕುಶ ವಿಚಾರಣೆ ಮಾಡಿ ಮುಂದಿನ ತಿಂಗಳು ವರದಿ ನೀಡಬೇಕೆಂದು ಹೇಳಿದ್ದಾರೆ.
ಇದಕ್ಕೂ ಮುನ್ನ, ಮಹಾನಗರ ಪಾಲಿಕೆಯ ಪರಿಸರ ಇಂಜಿನೀಯರ್ ಮುನಾಫ್ ಪಟೇಲ್ ಮಾತನಾಡಿ, ಕಲಬುರಗಿ ಮಹಾನಗರದಲ್ಲಿ 55 ವಾರ್ಡ್‍ಗಳಲ್ಲಿ ಮನೆ-ಮನೆ ಕಸ ಸಂಗ್ರಹಣೆಗೆ 351 ಮಂದಿ, ಕಸಗೂಡಿಸುವಿಕೆಗೆ 651, ಸಾಗಾಣಿಕೆ 166 ಮಂದಿ ಸೇರಿ ಒಟ್ಟು 1168 ಪೌರಕಾರ್ಮಿಕರಿದ್ದಾರೆ ಎಂದು ಸಭೆಗೆ ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ವಿಧಾನ ಪರಿಷತ್ ಸದಸ್ಯ ತಿಪ್ಪಣ್ಣಪ್ಪ ಕಮಕನೂರು ಅವರು, ನಾನು ವಾಸವಿರುವ 35ನೇ ವಾರ್ಡಿನಲ್ಲಿ ಕೇವಲ ಮೂರೇ ಮಂದಿ ಪೌರಕಾರ್ಮಿಕರು ಕಾರ್ಯನಿರ್ವಹಿಸುತ್ತಿದ್ದಾರೆ. ಪೌರ ಕಾರ್ಮಿಕರ ನಿಯೋಜನೆಯಲ್ಲಿ ಭಾರೀ ಅವ್ಯವಹಾರ ನಡೆದಿದೆ ಎಂದು ಅವರು ಆರೋಪಿಸಿದರು.
ಶಾಸಕ ಬಸವರಾಜ ಮುತ್ತಿಮೂಡ್ ಮಾತನಾಡಿ, ನಮ್ಮ ವಾರ್ಡ್‍ನಲ್ಲಿಯೂ ಇದೇ ಸ್ಥಿತಿ ಎಂದು ಧ್ವನಿಗೂಡಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಸಚಿವರು, ವಾರ್ಡ್‍ವಾರು ಪೌರಕಾರ್ಮಿಕರ ನೇಮಕ, ನಿಯೋಜನೆ ಮುಂತಾದ ಮಾಹಿತಿ ನೀಡುವಂತೆ ತಾಕೀತು ಮಾಡಿದರು.