ದುರ್ಮುಖನಾಮ ಸಂವತ್ಸರದ ಶ್ರೀಶ್ರೀಗಳವರ ಚಾತುರ್ಮಾಸ್ಯವು 'ಆನಂದದ ಯುಗ ಜಗಕವತರಿಸಲಿ ಗೋವಿಂದ!' ಎಂಬ ಘೋಷವಾಕ್ಯದೊಂದಿಗೆ ಗೋಚಾತುರ್ಮಾಸ್ಯವಾಗಿ ಆಚರಿತವಾಗಲಿದ್ದು, ಗೋವಿನ ಸಂರಕ್ಷಣೆ - ಸಂವರ್ಧನೆ - ಸಂಶೋಧನೆ - ಸಂಬೋಧನೆಗಳಿಗೆ ಸಂಬಂಧಿಸಿದ ಹಲವು ಕಾರ್ಯಕ್ರಮ ವೈವಿಧ್ಯಗಳು ಈ ಸಂದರ್ಭದಲ್ಲಿ ಸಂಯೋಜಿತವಾಗಿದೆ.
ಚಾತುರ್ಮಾಸ್ಯದ ಸಂದರ್ಭದಲ್ಲಿ ಪ್ರತಿದಿನವು ಶ್ರೀಶ್ರೀರಾಘವೇಶ್ವರಭಾರತೀ ಮಹಾಸ್ವಾಮಿಗಳವರು ಚಾತುರ್ಮಾಸ್ಯ ಸಂದೇಶವನ್ನು ಅನುಗ್ರಹಿಸಲಿದ್ದು, ನಿರ್ದಿಷ್ಟ ದಿನಗಳಂದು ಗೋಕಥೆ ಹಾಗು ಭಾವಪೂಜೆಗಳನ್ನು ನಡೆಸಿಕೊಡಲಿದ್ದಾರೆ.
ಪ್ರತಿದಿನ ಒಬ್ಬರು ಗೋಪ್ರೇಮಿ ಸಂತರು ಸಭೆಯಲ್ಲಿ ದಿವ್ಯಸಾನ್ನಿಧ್ಯವಹಿಸಿ ಸಂತ ಸಂದೇಶವನ್ನು ನೀಡಲಿದ್ದು, ಅನುದಿನವೂ ಗೋಸೇವೆಯಲ್ಲಿ ತೊಡಗಿಸಿಕೊಂಡಿರುವ ಒಬ್ಬರಿಗೆ ಗೋಸೇವಕ ಪುರಸ್ಕಾರ ನೀಡಲಾಗುವುದು. ಹಾಗೆಯೇ ದಿನ ನಿತ್ಯ ಗೋವಿಗೆ ಸಂಬಂಧಿಸಿದ ಪುಸ್ತಕ, ಸಿಡಿ, ಮತ್ತಿತರ ಸುವಸ್ತುಗಳು ಲೋಕಾರ್ಪಣೆಗೊಳ್ಳಲಿವೆ.
ದಿನಂಪ್ರತಿ ಅಪರಾಹ್ನ ೩ ಗಂಟೆಯಿಂದ ಗೋಸಂದೇಶ ಸಭೆ ನಡೆಯಲಿದ್ದು, ದಿನಕ್ಕೊಂದು ವಿಷಯದಂತೆ ದೇಶಿ ಗೋವು, ಗೋಆಧಾರಿತ ಕೃಷಿ, ಗೋಮೂತ್ರ - ಡಯಾಬಿಟೀಸ್, ಗೋಕೇಂದ್ರಿತ ಜೀವನ, ಪಂಚಗವ್ಯ ಚಿಕಿತ್ಸೆ ಇತ್ಯಾದಿ ಗೋಸಂಬಂಧಿ ವಿಷಯಗಳ ಬಗ್ಗೆ ಸಂದೇಶ ನೀಡಲಿದ್ದಾರೆ. ಸಂಪನ್ಮೂಲ ವ್ಯಕ್ತಿಗಳಾದ ಡಾ.ಕೆ.ಪಿ.ರಮೇಶ, ಎಂ.ಬಿ ಪುರಾಣಿಕ್, ಅಭಯ ದೇಸಾಯಿ, ಲಕ್ಷ್ಮಿ ತಾತಾಚಾರ್ಯ, ಜಯಕೃಷ್ಣ ತಿರುವನಂತಪುರ, ಶ್ರೀನಿವಾಸ ರೆಡ್ಡಿ ಮುಂತಾದವುರುಗಳು ಮಾತನಾಡಲಿದ್ದಾರೆ. ಅಂತೆಯೇ ನಿಗದಿತ ದಿನಗಳಂದು ಗೋಸಂಬಂಧಿ ವಿಷಯಾಧಾರಿತವಾದ ಗೋವಿಚಾರ ಗೋಷ್ಠಿಗಳು ಸಂಪನ್ನವಾಗಲಿವೆ.
ಗೋಚಾತುರ್ಮಾಸ್ಯ ಸಮಯದಲ್ಲಿ ಶ್ರೀಮಠದ ಆವರಣವು ಗೋಸಂಬಂಧೀ ವಿಚಾರಗಳಿಂದ ಕಂಗೊಳಿಸಲಿದ್ದು, ಪ್ರತಿ ಭಾನುವಾರ ಶಾಲಾ ಮಕ್ಕಳಿಗೆ ರಸಪ್ರಶ್ನೆ, ಪ್ರಬಂಧ, ಚಿತ್ರ, ಹಾಡು, ಭಾಷಣ ಹಾಗೂ ಗ್ರಾಮೀಣ ಸೊಗಡು ಬಿಂಬಿಸುವ ಎತ್ತಿನ ಗಾಡಿ ಸವಾರಿ ಇತ್ಯಾದಿ ವೈಶಿಷ್ಟ್ಯಪೂರ್ಣವಾದ ಕಾರ್ಯಕ್ರಮಗಳು ಜರುಗಲಿವೆ.
ಚಾತುರ್ಮಾಸ್ಯ ಸಂದರ್ಭದಲ್ಲಿ ಪ್ರತಿದಿನ ಬೆಳಗ್ಗೆ ಹಾಗೂಸಂಜೆ ಶ್ರೀಕರಾರ್ಚಿತ ದೇವತಾರ್ಚನೆ, ಮಾತೆಯರಿಂದ ಕುಂಕುಮಾರ್ಚನೆ, ಆದಿತ್ಯಹೃದಯ ಪಠಣ, ಫಲ ಸಮರ್ಪಣೆ, ಶ್ರೀಗಳಿಂದ ಮಂತ್ರಾಕ್ಷತೆ ಅನುಗ್ರಹ ಹಾಗೂ ರಾತ್ರಿ ಶ್ರೀಶ್ರೀಗಳವರಿಂದ ಸಾಧನಾಪಂಚಕ ಪ್ರವಚನಾನುಗ್ರಹ ನಡೆಯಲಿದೆ.
ವಿಶಿಷ್ಟ ನಿರೂಪಣೆಯ ಗೋಕಥಾ
ಪ್ರತಿ ಭಾನುವಾರ, ಸ್ವಾತಂತ್ರ್ಯದಿನ, ಕೃಷ್ಣಾಷ್ಟಮಿಯ ವಿಶೇಷ ದಿನಗಳಂದು ಗೋವಿನ ಕುರಿತಾದ ಕಥಾ ನಿರೂಪಣೆ, ಗಾಯನ, ಚಿತ್ರರಚನೆಗಳನ್ನೋಳಗೊಂಡ ವೈಶಿಷ್ಟ್ಯಪೂರ್ಣವಾದ 'ಗೋಕಥಾ' ಸಂಪನ್ನವಾಗಲಿದ್ದು, ಪೂಜ್ಯ ಶ್ರೀಶ್ರೀಗಳವರು ಗೋಕಥೆ ನಿರೂಪಣೆಯನ್ನು ಮಾಡಲಿದ್ದಾರೆ.