ಚಿನ್ನದ ಹುಡುಗಿ ಹಾಡಿ ಹೊಗಳಿದ ರಾಜ್ಯಪಾಲರು

ಗುರುವಾರ, 10 ಮಾರ್ಚ್ 2022 (18:27 IST)
ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ | ಬುಶ್ರಾ ಮತೀನ್
 
ಬೆಳಗಾವಿ, ಮಾ.10: ಬಿಇ ಸಿವಿಲ್ ಎಂಜಿನಿಯರಿಂಗ್ ವಿಭಾಗದ ಬುಶ್ರಾ ಮತೀನ್ 16 ಚಿನ್ನದ ಪದಕ ಪಡೆಯುವ ಮೂಲಕ ದಾಖಲೆ ಬರೆದಿದ್ದಾರೆ. ಬೆಳಗಾವಿ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ 21ನೆ ಘಟಿಕೋತ್ಸವದಲ್ಲಿ ವಿದ್ಯಾರ್ಥಿನಿ ಚಿನ್ನದ ಪದಕಗಳನ್ನು ಕೊರಳಿಗೇರಿಸಿಕೊಂಡರು.
ವಿವಿ ಇತಿಹಾಸದಲ್ಲೇ ಅತಿಹೆಚ್ಚು ಪದಕ ಪಡೆದ ಗೌರವಕ್ಕೆ ಬುಶ್ರಾ ಮತೀನ್ ಪಾತ್ರರಾದರು. ಈವರೆಗಿನ ವಿವಿ ಇತಿಹಾಸದಲ್ಲಿ ಅತಿ ಹೆಚ್ಚು ಅಂದರೆ 13 ಚಿನ್ನದ ಪದಕಗಳನ್ನು ಗಳಿಸಿದ್ದ ದಾಖಲೆ ಇತ್ತು. ಬುಶ್ರಾ ಮತೀನ್‍ಗೆ 16 ಚಿನ್ನದ ಪದಕಗಳನ್ನು ನೀಡಿ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅಭಿನಂದಿಸಿದರು. ಬೆಂಗಳೂರು ಬಿಎನ್‍ಎಂ. ತಾಂತ್ರಿಕ ಸಂಸ್ಥೆಯ ಇ ಅಂಡ್ ಸಿ ವಿಭಾಗದ ಸ್ವಾತಿ ದಯಾನಂದ, ಬೆಳಗಾವಿಯ ಕೆ.ಎಲ್.ಇಯ ಡಾ.ಎಂ.ಎಸ್. ಶೇಷಗಿರಿ ಕಾಲೇಜಿನ ವಿವೇಕ್ ಭದ್ರಕಾಳಿ, ಬಳ್ಳಾರಿಯ ಚಂದನಾ ಎಂ. ತಲಾ 7 ಚಿನ್ನದ ಪದಕ ಪಡೆದರು.
 
ಡಾಕ್ಟರೇಟ್ ಗೌರವ ಪ್ರಧಾನ: ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ 21ನೆ ಘಟಿಕೋತ್ಸವದಲ್ಲಿ ಹೈದರಾಬಾದ್‍ನ ಭಾರತ್ ಬಯೋಟೆಕ್ ಇಂಟನ್ರ್ಯಾಷನಲ್ ಲಿಮಿಟೆಡ್‍ನ ವ್ಯವಸ್ಥಾಪಕ ನಿರ್ದೇಶಕ ಡಾ. ಕೃಷ್ಣಾ ಸೇರಿ ಮೂವರಿಗೆ ಗೌರವ ಡಾಕ್ಟರೇಟ್ ನೀಡಿ ಗೌರವಿಸಲಾಯಿತು. ಡಾ. ಕೃಷ್ಣಾ ಅವರ ಪರವಾಗಿ ಲೋಕಸಭೆ ಸ್ಪೀಕರ್ ಓಂ ಬಿರ್ಲಾ ಹಾಗೂ ಇನ್ಫೋಸಿಸ್ ಸಹಸಂಸ್ಥಾಪಕ ಸೇನಾಪತಿ ಕ್ರಿಶ್ ಗೋಪಾಲಕೃಷ್ಣನ್ ಅವರು ಡಾಕ್ಟರ್ ಆಫ್ ಸೈನ್ಸ್ ಗೌರವ ಪದವಿ ಸ್ವೀಕರಿಸಿದರು. ರಾಜ್ಯಪಾಲ ಥಾವರಚಂದ ಗೆಹ್ಲೋಟ್ ಪ್ರಶಸ್ತಿ ಪ್ರದಾನ ಮಾಡಿದರು. ಬೆಂಗಳೂರು ಭಾರತೀಯ ವಿಜ್ಞಾನ ಮಂದಿರ ಪ್ರಾಧ್ಯಾಪಕ ಪ್ರೊ. ರೋಹಿನಿ ಗೋಡಬೋಲೆ ಅವರ ಅನುಪಸ್ಥಿತಿಯಲ್ಲಿ ವಿಟಿಯು ಕುಲಪತಿ ಪ್ರೊ. ಕರಿಸಿದ್ದಪ್ಪ ಅವರು ರಾಜ್ಯಪಾಲರಿಂದ ಗೌರವ ಡಾಕ್ಟರೇಟ್ ಪದವಿ ಸ್ವೀಕರಿಸಿದರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ