ಸಾರಿಗೆ ಸಂಚಾರ ಅಸ್ತವ್ಯಸ್ಥ: ಸರಕಾರ ಮಧ್ಯಪ್ರವೇಶಕ್ಕೆ ಯಡಿಯೂರಪ್ಪ ಮನವಿ

ಸೋಮವಾರ, 25 ಜುಲೈ 2016 (18:13 IST)
ಮಾಧ್ಯಮ ಹೇಳಿಕೆ ಬಿಡುಗಡೆ ಮಾಡಿರುವ ಬಿ.ಎಸ್‌.ಯಡಿಯೂರಪ್ಪ, ರಾಜ್ಯದ ಜನತೆಯ ಹಿತ ದೃಷ್ಟಿಯಿಂದ ರಾಜ್ಯ ಸರಕಾರ ಮಧ್ಯ ಪ್ರವೇಶಿಸಿ ಸಾರಿಗೆ ನೌಕರರ ಸಮಸ್ಯೆಗಳನ್ನು ಪರಿಹರಿಸಬೇಕು. ಸಾರಿಗೆ ನೌಕರರ ಸಂಘಟನೆ ಹಾಗೂ ಸರಕಾರ ಪರಸ್ಪರ ಮಾತುಕತೆ ಮೂಲಕ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬೇಕು ಎಂದು ತಿಳಿಸಿದರು.
 
ರಾಜ್ಯ ಸರಕಾರಕ್ಕೆ ಸಾರಿಗೆ ನೌಕರರ ಬೇಡಿಕೆಗಳನ್ನು ಈಡೇರಿಸುವುದರ ಜೊತೆಗೆ ಸಾರ್ವಜನಿಕರ ಹಿತ ರಕ್ಷಣೆ ಮಾಡುವ ಜವಾಬ್ದಾರಿಯೂ ಇದೆ. ಸರಕಾರ ಹಾಗೂ ಸಾರಿಗೆ ನೌಕರರ ಸಂಘಟನೆಗಳು ಪರಸ್ಪರ ಮಾತುಕತೆಯ ಮೂಲಕ ಸಮಸ್ಯೆ ಇತ್ಯರ್ಥಗೊಳಿಸುವ ಅವಕಾಶವಿರುವುದರಿಂದ ಎಸ್ಮಾ ಅಸ್ತ್ರ ಬಳಸುವ ಬೆದರಿಕೆ ನೀಡಬಾರದು ಎಂದು ತಿಳಿಸಿದರು.
 
ಕಳೆದ 20 ದಿನಗಳ ಹಿಂದೆ  ಸಾರಿಗೆ ನೌಕರರ ಸಂಘಟನೆಗಳು ರಾಜ್ಯಾದ್ಯಂತ ಮುಷ್ಕರ ಕೈಗೊಳ್ಳುವ ಕುರಿತು ಸರಕಾರಕ್ಕೆ ಮಾಹಿತಿ ನೀಡಿದ್ದವು. ಆದರೆ, ರಾಜ್ಯ ಸರಕಾರ ಇಲ್ಲಿಯವರೆಗೂ ಸಮಸ್ಯೆ ಇತ್ಯರ್ಥಗೊಳಿಸಲು ಮುಂದಾಗದಿರುವುದು ಖಂಡನೀಯ. ಸರಕಾರಕ್ಕೆ ಸಾರ್ವಜನಿಕರ ಹಿತ ರಕ್ಷಣೆಯ ಕುರಿತು ಕಾಳಜಿ ಇಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ಗುಡುಗಿದ್ದಾರೆ.

ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ