ಬೆಂಗಳೂರು: ಬಡವರ ಮಕ್ಕಳಿಗೆ ಉತ್ತಮ ಶಿಕ್ಷಣದ ಜತೆಗೆ ಇದೀಗ ವಾರದಲ್ಲಿ ನಾಲ್ಕು ದಿನನ ಮೊಟ್ಟೆ ಮತ್ತು ಪೂರಕ ಪೌಷ್ಟಿಕ ಆಹಾರ ನೀಡಲಾಗುವುದು ಎಂದು ಸಿಎಂ ಸಿದ್ದರಾಮಯ್ಯ ಅವರು ಹೇಳಿದರು.
ಬೆಂಗಳೂರಿನಲ್ಲಿಂದು ಅಜೀಂ ಪ್ರೇಮ್‌ಜಿ ಫೌಂಡೇಶನ್ ಸಹಭಾಗಿತ್ವದಲ್ಲಿ ಸರ್ಕಾರಿ ಮತ್ತು ಅನುದಾನಿತ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಲ್ಲಿ ಮಕ್ಕಳಿಗೆ ವಾರದಲ್ಲಿ ಆರು ದಿನ ಪೂರಕ ಪೌಷ್ಟಿಕ ಆಹಾರ ನೀಡುವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ರಾಜ್ಯದ ಸರ್ಕಾರಿ ಮತ್ತು ಸರ್ಕಾರದಿಂದ ಅನುದಾನ ಪಡೆಯುತ್ತಿರುವ ಶಾಲೆಗಳ ಮಕ್ಕಳಿಗೆ ಅಜೀಂ ಪ್ರೇಮ್‌ಜಿ ಪೌಂಡೇಶನ್ ಸರ್ಕಾರದೊಂದಿಗೆ ಕೈ ಜೋಡಿಸಿದ್ದು, ಅದರಂತೆ ವಾರದಲ್ಲಿ ನಾಲ್ಕು ದಿನ ಮೊಟ್ಟೆ ವಿತರಣೆ ಮಾಡಲಾಗುವುದು ಎಂದರು.
ಮಕ್ಕಳ ಮಾನಸಿಕ ಆರೋಗ್ಯ ಮತ್ತು ಉತ್ತಮ ಶಿಕ್ಷಣಕ್ಕೆ ಗುಣಮಟ್ಟದ ಆಹಾರ ಅತ್ಯಗತ್ಯ. ಬಡವರ ಮಕ್ಕಳಿಗೆ ಉತ್ತಮ ಶಿಕ್ಷಣದ ಅವಕಾಶಗಳನ್ನು ಸೃಷ್ಟಿಸುವುದು ನಮ್ಮ ಆಶಯವಾಗಿದೆ ಎಂದರು.
ಕೆಲ ಮಕ್ಕಳು ಬೆಳಗ್ಗೆ ತಿಂಡಿ ಸೇವನೆ ಮಾಡದೇ ಹಾಗೆಯೇ ತರಗತಿ ಬರುತ್ತಾರೆ. ಹಸಿದ ಹೊಟ್ಟೆಯಿಂದ ಪಾಠ ಕೇಳುವುದು ಕಷ್ಟ. ಹೀಗಾಗಿ ವಾರದಲ್ಲಿ ಎರಡು ದಿನ ಊಟ ಮತ್ತು ಮೊಟ್ಟೆ ನೀಡಲು ನಮ್ಮ ಸರ್ಕಾರ ನಿರ್ಧರಿಸಿತು. ಈಗ ವಾರದಲ್ಲಿ ನಾಲ್ಕು ದಿನ ಮಕ್ಕಳಿಗೆ ಮೊಟ್ಟೆ ಮತ್ತು ಪೂರಕ ಪೌಷ್ಟಿಕ ಆಹಾರ ನೀಡಲು ಚಿಂತಿಸಲಾಗಿದೆ.