ಅತ್ಯಾಶ್ಚರ್ಯ : ಬಿಸಿಲ ನಾಡಿನ ಅರಣ್ಯ ಕೃಷಿಯಲ್ಲಿ ಅಮೋಘ ಸಾಧನೆ

ಭಾನುವಾರ, 15 ಸೆಪ್ಟಂಬರ್ 2019 (18:08 IST)
ಬಿಸಿಲ ನಾಡಲ್ಲಿ ತಂಪು ನೀಡುವ ಮರಗಳನ್ನು ಮತ್ತು ತೋಟಗಾರಿಕೆ ಬೆಳೆಗಳನ್ನು  ಬೆಳೆಸಿ ಅತ್ಯಾಶ್ಚರ್ಯವಾಗುವ ಜತೆಗೆ ರೈತರೊಬ್ಬರು ಮಾದರಿಯಾಗಿದ್ದಾರೆ.

ನಲವತ್ತು ವರ್ಷದ ಲಕ್ಷ್ಮೀಕಾಂತ ಹಿಬಾರೆಯವರದು ಕೃಷಿ ಕುಟುಂಬವಲ್ಲದಿದ್ದರೂ ಕಲಬುರಗಿ ಜಿಲ್ಲೆಯಂತಹ ಬಿಸಿಲ ನಾಡಲ್ಲಿ ತಂಪು ನೀಡುವ ಮರಗಳನ್ನು ಮತ್ತು ತೋಟಗಾರಿಕೆ ಬೆಳೆಗಳನ್ನು ಬೆಳೆಸಿದ್ದಾರೆಂದರೆ ಅತ್ಯಾಶ್ಚರ್ಯ. ಕಾಡಿನಲ್ಲಿ ಬೆಳೆಯಬೇಕಾದ ಮರಗಳನ್ನು ಇದೇನು ಕಾಡೋ ಅಥವಾ ಹೊಲವೋ ಎನ್ನುವಂತೆ ಕಲಬುರಗಿ ತಾಲೂಕಿನ ಹಾಗರಗಾ ಗ್ರಾಮದಲ್ಲಿ ಹಿರಿಯರು ಖರೀದಿಸಿದ 3.5 ಎಕರೆಯಲ್ಲಿ ಬೆಳೆಸಿ ಅರಣ್ಯ-ಕೃಷಿಯಲ್ಲಿ ಗಣನೀಯ ಸಾಧನೆಗೈದಿದ್ದಾರೆ.

ಕೃಷಿ ವಿಜ್ಞಾನಿಗಳ-ತಂತ್ರಜ್ಞರ ಸಲಹೆಯಂತೆ ಕೆವಿಕೆ, ಅರಣ್ಯ ಇಲಾಖೆ ಮತ್ತು ಹಿಮಾಚಲ ಪ್ರದೇಶದ ರೈತರಿಂದ ಬಗೆಬಗೆಯ ಸುಮಾರು 3875 ಸಸಿಗಳ್ನು ಖರೀದಿಸಿ 2018ರ ಸೆಪ್ಟೆಂಬರಿನಲ್ಲಿ ಶ್ರೀಗಂಧ, ರತ್ನಚಂದನ, ನುಗ್ಗೆ, ಲಿಂಬೆ, ನೆಲ್ಲಿಕಾಯಿ, ನೇರಳೆ, ಮಹಾಗಣಿ, ಹೆಬ್ಬೇವು, ಮೋಸಂಬಿ ಹಾಗೂ ಪೇರಲ ಗಿಡಗಳಲ್ಲದೇ ಬದುವಿನಲ್ಲಿಯೂ 100 ಲಿಂಬೆ ಗಿಡಗಳನ್ನು ಬೆಳೆಸಿದ್ದಾರೆ. ಈಗ ಒಂದು ವರ್ಷದ ಗಿಡಗಳಿದ್ದು, ಎಕರೆಗೆ 60,000ರೂ.ದಂತೆ ವೆಚ್ಚವಾಗಿದೆ. ಶ್ರೀಗಂಧದ 850 ಸಸಿಗಳನ್ನು ಸಾಲಿನಿಂದ ಸಾಲಿಗೆ 16 ಅಡಿ ಮತ್ತು ಗಿಡದಿಂದ ಗಿಡಕ್ಕೆ 10 ಅಡಿ ಅಂತರದಲ್ಲಿ ನಾಟಿ ಮಾಡಿದ್ದಾರೆ. ಗಂಗಾಕಲ್ಯಾಣದ ಕೊಳವೆಬಾವಿಯಿಂದ ಪ್ರತಿ ಎಂಟು ಅಡಿಗೆ ಹನಿ ನೀರಾವರಿ ಪೈಪು ಅಳವಡಿಸಿ, ಪ್ಲಾಸ್ಟಿಕ್ ಮಲ್ಚಿಂಗ್ ಶೀಟ್ ಉಪಯೋಗಿಸಿ 8-10 ದಿನಗಳಿಗೊಮ್ಮೆ ಒಂದು ವರ್ಷದ ಗಿಡಗಳಿಗೆ ನೀರು ಪೂರೈಸಿ ನೀರುಳಿಸುತ್ತಿದ್ದಾರೆ. ಕೃಷಿ ತ್ಯಾಜ್ಯದಿಂದ ವರ್ಷಕ್ಕೆ 20 ಚೀಲ ಎರೆಹುಳು ಗೊಬ್ಬರ ಉತ್ಪಾದಿಸುತ್ತಿದ್ದಾರೆ.
ಗುಡ್ಡಗಾಡಿನ ಕಲ್ಲು-ಮಣ್ಣು ಮಿಶ್ರಿತ ಜಮೀನಿನಲ್ಲಿ ಮರಗಳನ್ನು ಮತ್ತು ಬೆಳೆಗಳನ್ನು ಬೆಳೆಸುವುದು ಕಷ್ಟಕರವಾದರೂ, ಕಾಂಪೋಸ್ಟ್, ಎರೆಹುಳು ಮತ್ತು ಹಸಿರೆಲೆ ಗೊಬ್ಬರಗಳಿಂದ, ಜೀವಾಮೃತ ಮತ್ತು ಸೂಕ್ಷ್ಮ ಜೀವಾಣುವಿರುವ ವೇಸ್ಟ್ ಡಿ-ಕಾಂಪೋಜರಿನಿಂದ ಭೂಮಿಯ ಫಲವತ್ತತೆ ಹೆಚ್ಚಿಸಿದ್ದಾರೆ.

ಮಣ್ಣನ್ನು ಸಡಿಲುಗೊಳಿಸಿ, ತಲಾ ಒಂದು ಮೀಟರ್ ಅಗಲ ಮತ್ತು ಆಳದ ಗುಂಡಿಗಳಲ್ಲಿ ಶೇ.60ರಷ್ಟು ಕೆಂಪು ಮಣ್ಣು, ತಲಾ ಶೇ.20ರಷ್ಟು ಕಾಂಪೋಸ್ಟ್, ಬೇವಿನ ಹಿಂಡಿಯನ್ನು ಹಾಕಿ ಸಸಿಗಳನ್ನು ನಾಟಿ ಮಾಡಿದ್ದಾರೆ. ಜಮೀನಿನ ಸಮರ್ಪಕ ಬಳಕೆಗಾಗಿ ಕೃಷಿ ಯಂತ್ರೋಪಕರಣಗಳನ್ನು, ಕೀಟ-ರೋಗಗಳ ಹತೋಟಿಗೆ ಸಾವಯವ ಔಷಧಿಗಳನ್ನು, ಹಳದಿ ಅಂಟು ಮತ್ತು ಮೋಹಕ ಬಲೆಗಳನ್ನು, ಜೈವಿಕ ನಿಯಂತ್ರಣಕ್ಕಾಗಿ ಗುಲಗಂಜಿ ಕೀಟಗಳನ್ನು ಉಪಯೋಗಿಸುತ್ತಿರುವುದರಿಂದ ಎಲ್ಲ ಮರಗಳು ಹುಲುಸಾಗಿ ಮತ್ತು ಸಮೃದ್ಧವಾಗಿ ಬೆಳೆಯುತ್ತಿವೆ.

ಶ್ರೀಗಂಧದ ಮತ್ತು ರತ್ನಚಂದನದ ಸಾಲುಗಳ ಮಧ್ಯದಲ್ಲಿ ಮೊದಲಿಗೆ ತೊಗರಿಯನ್ನು ನಂತರ ಅಂತರಬೆಳೆಯಾಗಿ ಎಲೆಕೋಸು, ಚೆಂಡು ಮತ್ತು ಸೇವಂತಿಗೆ ಹೂವಿನ ಗಿಡಗಳನ್ನು; ಪ್ಲಾಸ್ಟಿಕ್ ಹೊದಿಕೆಯನ್ನು ಬಳಸಿ ಆಶ್ರಯ ಸಸ್ಯಗಳಾಗಿ ಬದನೆ, ನುಗ್ಗೆ, ಪೇರಲ, ಕಲ್ಲಂಗಡಿ, ನೇರಳೆಯನ್ನು ಬೆಳೆಸಿದ್ದಾರೆ. ಇವುಗಳೆಲ್ಲ ಪರಾವಲಂಬಿಯಾಗಿರುವ ಶ್ರೀಗಂಧದ ಸಸಿಗಳಿಗೆ ಆಶ್ರಯ, ಉತ್ತಮ ಆಹಾರವಾಗಿವೆಯಲ್ಲದೆ, ಹೆಚ್ಚು ತೇವಾಂಶ ಸಂರಕ್ಷಣೆಗೂ ಸಹಕಾರಿಯಾಗಿವೆ. ಎಲೆಕೋಸಿನಿಂದ 50,000ರೂ., ಚೆಂಡು-ಸೇವಂತಿಗೆ ಹೂವಿನಿಂದ 25,000ರೂ. ಆದಾಯ ಗಳಿಸಿದ್ದಾರೆ. ಸದ್ಯಕ್ಕೆ ಪ್ಲಾಸ್ಟಿಕ್ ಹೊದಿಕೆಯಲ್ಲಿ ಬದನೆ, ಪೇರಲ, ನುಗ್ಗೆ ಬೆಳೆಗಳಿದ್ದು, ಮಾರಾಟಕ್ಕೆ ಸಿದ್ಧವಾಗಿವೆ. ಕಲ್ಲಂಗಡಿಯನ್ನು ಫೆಬ್ರುವರಿಯ ಅಂತ್ಯದಲ್ಲಿ ನಾಟಿ ಮಾಡಿ ಈವರೆಗೆ ಎಕರೆಗೆ 36 ಟನ್ ಇಳುವರಿ ಪಡೆದು ಸುಮಾರು 2 ಲಕ್ಷ ರೂ. ಲಾಭ ಪಡೆದಿದ್ದಾರೆ. ನುಗ್ಗೆಯ ಕಾಯಿ-ಎಲೆಗಳನ್ನು, ಪೇರಲ ಹಣ್ಣುಗಳನ್ನು, ಮೆಂತ್ಯ, ಪಾಲಕ, ಕೊತ್ತಂಬರಿ ಸೊಪ್ಪುಗಳನ್ನು ಮತ್ತು ಹಬ್ಬಹರಿ ದಿನಗಳಲ್ಲಿ ಚೆಂಡು-ಸೇವಂತಿಗೆ ಹೂಗಳ ಮಾರಾಟದಿಂದಲೂ ಲಾಭ ಗಳಿಸುತ್ತಿದ್ದಾರೆ.

ಇವರದು ಮೂಲ ಮಹಾರಾಷ್ಟ್ರದ ದುಧನಿ. ದಿಗಂಬರರಾವ ಹಿಬಾರೆಯ ಕಿರಿಯ ಪುತ್ರ ಲಕ್ಷ್ಮೀಕಾಂತ ಮೆಟ್ರಿಕ್‍ವರೆಗೆ ಓದಿದ್ದಾರೆ. ಖಾಸಗಿ ಶಿಕ್ಷಣ ಸಂಸ್ಥೆಯಲ್ಲಿ ಕ್ಲರ್ಕ್ ಆಗಿದ್ದರೂ ಬಿಡುವಿನಲ್ಲಿ ಮಡದಿ ಪ್ರೀತಿಯೊಂದಿಗೆ 10 ವರ್ಷದಿಂದ ಅರಣ್ಯ-ಕೃಷಿಯಲ್ಲಿ ತೊಡಗಿದ್ದಾರೆ. ಭಾರತ ಸರ್ಕಾರದ ಬಿದಿರು ಮಿಷನ್ ಆಯೋಜಿಸಿದ 5 ದಿನದ ತರಬೇತಿಯನ್ನೂ ಪಡೆದಿದ್ದಾರೆ. “ನಾಲ್ಕು ತಿಂಗಳಲ್ಲೇ ಒಂದೆಕರೆಯ ಕಲ್ಲಂಗಡಿ 2ಲಕ್ಷ ರೂ. ಆದಾಯ ನೀಡಿದೆಯೆಂದರೆ ಇಂತಹ ಬೆಳೆ ಬೇರೊಂದಿಲ್ಲ. ಹದಿನೈದು ವರ್ಷಗಳ ಬಳಿಕ  ಶ್ರೀಗಂಧದ ಮರಗಳಿಂದ ಆದಾಯ ನಿರೀಕ್ಷಿಸಿದ್ದೇನೆ. ಈಗಿನ ಪರಿಸ್ಥಿತಿಯಲ್ಲಿ ಮಾನವನ ಆಯಸ್ಸು ಇಳಿಮುಖವಾಗುತ್ತಿರುವುದು ಆತಂಕಕಾರಿಯಾಗಿದೆ. ಮಕ್ಕಳಿಗೆ ಪರಿಶುದ್ಧ ಗಾಳಿ, ಆಹಾರ ಮತ್ತು ಶ್ರಮಿಕ ಜೀವನದ ಮಹತ್ವ ಹೇಳಿಕೊಟ್ಟು ಆರೋಗ್ಯವಂತರನ್ನಾಗಿಸುವುದು; ಪರಿಸರ ಸಮತೋಲನಕ್ಕಾಗಿ ಹೆಚ್ಚು ಕಾರ್ಬನ್ ಡೈ ಆಕ್ಸೈಡ್ ಹೀರಿಕೊಳ್ಳುವ ಬಿದಿರು ಮರಗಳನ್ನು ಬೆಳೆಸುವಂತೆ ರೈತರಲ್ಲಿ ಜಾಗೃತಿ ಮೂಡಿಸುವುದು ಮೂಲೋದ್ದೇಶ. ಜೈವಿಕ-ಸಾವಯವ ಆಹಾರಧಾನ್ಯಗಳಿಂದ ಮಕ್ಕಳಲ್ಲಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಬೇಕು”ಎನ್ನುತ್ತಾರೆ ಲಕ್ಷ್ಮೀಕಾಂತ. ಸಂಪರ್ಕ ಸಂಖ್ಯೆ 9886108951.

ವರದಿ:
ಜಿ.ಚಂದ್ರಕಾಂತ,
ನಿವೃತ್ತ ಉಪನಿರ್ದೇಶಕರು
ವಾರ್ತಾ ಇಲಾಖೆ, ಕಲಬುರಗಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ