ಗ್ರೀನ್ ಕಾರಿಡಾರ್ ಹೆದ್ದಾರಿ ಕಲಬುರಗಿ ನಗರದಿಂದ ಹಾದು ಹೋಗಲಿ ಎಂದ ಖರ್ಗೆ

ಶುಕ್ರವಾರ, 9 ನವೆಂಬರ್ 2018 (19:39 IST)
ಉದ್ದೇಶಿತ ಮುಂಬೈ-ಚೆನ್ನೈ ಗ್ರೀನ್ ಕಾರಿಡಾರ್ ರಾಷ್ಟ್ರೀಯ ಹೆದ್ದಾರಿ ನಿರ್ಮಾಣಕ್ಕೆ ಕೇಂದ್ರ ಸರ್ಕಾರ ಯೋಜಿಸಿದೆ. ಈ ಹೆದ್ದಾರಿ ಕಲಬುರಗಿ ಮತ್ತು ಯಾದಗಿರಿ ನಗರಗಳಿಗೆ ಹೊಂದಿಕೊಂಡು ಹಾಯ್ದು ಹೋಗಿದಲ್ಲಿ ಈ ನಗರಗಳ ಬೆಳವಣಿಗೆಗೆ ಸಹಾಯಕವಾಗಲಿದೆ ಎಂದು ಸಂಸತ್ತಿನ ಸಾರ್ವಜನಿಕ ಲೆಕ್ಕಪತ್ರ ಸಮಿತಿ ಅಧ್ಯಕ್ಷರು ಹಾಗೂ ಕಲಬುರಗಿ ಸಂಸದ ಡಾ.ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ.   

ಕಲಬುರಗಿಯ ಐವಾನ್-ಎ-ಶಾಹಿ ಅತಿಥಿಗೃಹದಲ್ಲಿ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಗಳ ಕುರಿತು ಅಧಿಕಾರಿಗಳೊಂದಿಗೆ ನಡೆಸಿದ ಪ್ರಗತಿ ಪರಿಶೀಲನೆ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಕೈಗಾರಿಕೋದ್ಯಮಕ್ಕೆ ತುಂಬಾ ಅನುಕೂಲವಾಗಲಿರುವ ಉದ್ದೇಶಿತ ಈ ಗ್ರೀನ್ ಕಾರಿಡಾರ್ ಯೋಜನೆಗೆ ಸಧ್ಯ ಡಿ.ಪಿ.ಆರ್. ಕಾರ್ಯ ನಡೆಯುತ್ತಿದೆ. ಕಲಬುರಗಿ ಮತ್ತು ಯಾದಗಿರಿ ಜಿಲ್ಲೆಯಲ್ಲಿ 162 ಕಿ.ಮಿ. ಹೆದ್ದಾರಿ ಹಾದು ಹೋಗಲಿದೆಯಾದರು ಇವೆರಡು ನಗರಗಳಿಗೆ ಹಾದು ಹೋಗುತ್ತಿಲ್ಲ್ಲ. ಇವೆರಡು ನಗರಗಳ ಮೂಲಕ ಹಾದು ಹೋಗಿದಲ್ಲಿ ಈ ಜಿಲ್ಲೆಗಳ ಅಭಿವೃದ್ಧಿಗೆ ನೆರವಾಗಲಿದ್ದು, ಈ ನಿಟ್ಟಿನಲ್ಲಿ ಅಧಿಕಾರಿಗಳು ಮುತುವರ್ಜಿ ವಹಿಸಿ ಅಗತ್ಯ ಕ್ರಮ ಕೈಗೊಳ್ಳಿ ಎಂದರು.

ರಾಷ್ಟ್ರೀಯ ಹೆದ್ದಾರಿ 218ರಲ್ಲಿ ಬರುವ ಕಲಬುರಗಿ ನಗರದ ರಿಂಗ್ ರಸ್ತೆಗೆ ಮೊದಲ ಆದ್ಯತೆ ಕೊಟ್ಟು ಕಾಮಗಾರಿ ಬೇಗ ಪೂರ್ಣಗೊಳಿಸಿ. ಇದೇ ಹೆದ್ದಾರಿಯಲ್ಲಿ ಬರುವ ಕಲಬುರಗಿ-ಹುಮನಾಬಾದ ಮಧ್ಯದ ಹಳ್ಳಿಖೇಡ್ ಬಳಿ ರಸ್ತೆ ಚಿಕ್ಕದಾಗಿದೆ. ಅಗತ್ಯವಿದ್ದಲ್ಲಿ ರಸ್ತೆ ಬದಿಯಲ್ಲಿನ ಮನೆ, ಅಂಗಡಿಗಳನ್ನು ತೆರವುಗೊಳಿಸಿ ಅವರಿಗೆ ಸೂಕ್ತ ಪರಿಹಾರ ಕಲ್ಪಿಸಿ ನಿಗದಿತ ಅಳತೆಯಲ್ಲಿಯೆ ರಸ್ತೆ ನಿರ್ಮಿಸಬೇಕು ಹಾಗೂ ಅಲ್ಲಲ್ಲಿ ಗುಂಡಿಗಳ ಬಿದ್ದಿದ್ದು, ಅದನ್ನು ಮುಚ್ಚಿಸಬೇಕು. ಅಲ್ಲದೆ ಕುರಿಕೋಟಾ ಸೇತುವೆ ಮೇಲಿನ ರಸ್ತೆ ತುಂಬಾ ಕೆಟ್ಟಿದ್ದು, ಕೂಡಲೆ ಸುಧಾರಣೆ ಕೆಲಸ ಕೈಗೊಳ್ಳಿ ಎಂದು ಅಧಿಕಾರಿಗಳಿಗೆ ಸೂಚಿಸಿದರು.


ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ